ಜೂ.20ರಂದು ಕೇಂದ್ರ ಸರಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಡಿಸಿಎಂ ಡಿ.ಕೆ ಶಿವಕುಮಾರ್

‘ಅನ್ನಭಾಗ್ಯ ಯೋಜನೆ’ಗೆ ಅಕ್ಕಿ ನೀಡದಕ್ಕೆ ಆಕ್ರೋಶ

Update: 2023-06-16 08:50 GMT

ಬೆಂಗಳೂರು: 'ಅನ್ನಭಾಗ್ಯ' ಯೋಜನೆಗೆ ಕೇಂದ್ರ ಸರಕಾರ ಅಕ್ಕಿ ಪೂರೈಕೆ ಮಾಡಲು ನಿರಾಕರಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್,  'ಜೂ.20ರಂದು (ಮಂಗಳವಾರ) ಬೆಳಗ್ಗೆ 11 ಗಂಟೆಗೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕು' ಎಂದು ಕರೆ ನೀಡಿದರು. 

“ಕರ್ನಾಟಕ ರಾಜ್ಯದ ಪ್ರತಿಷ್ಠಿತ ಯೋಜನೆ ಅನ್ನಭಾಗ್ಯ ಜಾರಿಗೆ ಅಗತ್ಯ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರ ಅವಕಾಶ ನಿರಾಕರಿಸಿರುವುದು ಬಿಜೆಪಿಯ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿಗೆ ಸಾಕ್ಷಿ. ಇದರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಇದೇ 20 ರಂದು ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜನರಲ್ಲಿ ಅರಿವು ಮೂಡಿಸಲಿದೆ” ಎಂದರು. 

“ಕಾಂಗ್ರೆಸ್ ಐದು ಗ್ಯಾರಂಟಿ ಘೋಷಿಸಿತ್ತು. ಇದರ ಜಾರಿ ಬಗ್ಗೆ ವಿರೋಧ ಪಕ್ಷದ ಸ್ನೇಹಿತರು ಅನೇಕ ಟೀಕೆ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಬಂದ ಮೊದಲ ದಿನವೇ ಮೊದಲ ಆದೇಶ ಹೊರಡಿಸಿ ನಮ್ಮ ಬದ್ಧತೆ ಪ್ರದರ್ಶಿಸಿದ್ದೇವೆ. ಎರಡನೇ ಸಂಪುಟ ಸಭೆಯಲ್ಲಿ ಈ ಯೋಜನೆ ಜಾರಿ ಸಮಯ ನಿರ್ಧರಿಸಿದ್ದೇವೆ. ವಿರೋಧ ಪಕ್ಷಗಳ ಟೀಕೆಗೆ ನಾವು ಉತ್ತರ ನೀಡುವುದಿಲ್ಲ. ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ" ಎಂಬ ಮಾತನ್ನು ನಾವು ನಂಬಿದ್ದೇವೆ ಎಂದು ಅವರು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಸೋತರೆ ಕೇಂದ್ರ ಅನುದಾನ ಸ್ಥಗಿತ ಎಂದು ಹೇಳಿದ್ದರು. ಈಗ ಕರ್ನಾಟಕ ರಾಜ್ಯಕ್ಕೆ ಅಕ್ಕಿ ಖರೀದಿಗೆ ಅವಕಾಶ ತಪ್ಪಿಸುವ ಮೂಲಕ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಾಗಿ ಪ್ರಧಾನ ಮಂತ್ರಿಗಳು ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಅಧ್ಯಕ್ಷರು ಮತದಾರರನ್ನು ಬೆದರಿಸಿದ್ದರು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಮಾಡಿದ್ದು, ಮುಂದಿನ ತಿಂಗಳಿಂದ ಯೋಜನೆ ಜಾರಿಗೆ ತೀರ್ಮಾನ ಮಾಡಿದ್ದೆವು. ಇದಕ್ಕಾಗಿ ಭಾರತೀಯ ಆಹಾರ ಪ್ರಾಧಿಕಾರಕ್ಕೆ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ಪ್ರಾಧಿಕಾರ ಕೂಡ ಜೂನ್ 12 ರಂದು ಜುಲೈ ತಿಂಗಳಲ್ಲಿ ಇ ಹರಾಜು ಮೂಲಕ ಅಕ್ಕಿ ನೀಡುವುದಾಗಿ ಅನುಮತಿ ನೀಡಿತ್ತು. 2,08,425.750 ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಅನುಮತಿ ನೀಡುವುದಾಗಿ ಪ್ರಾಧಿಕಾರ ಪತ್ರ ಬರೆದಿತ್ತು. ಇದಾದ ಮರುದಿನ ಅಂದರೆ ಜೂನ್ 13 ರಂದು, ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವುದನ್ನು ತಡೆಯಲಾಗಿದೆ ಎಂದು ತಿಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಎಂ. ಸಿ. ಸುಧಾಕರ್, ಕೆಪಿಸಿಸಿ ಕಾರ್ಯಾ ಧ್ಯಕ್ಷರಾದ ಸಲೀಂ ಅಹ್ಮದ್, ಚಂದ್ರಪ್ಪ, ಶಾಸಕ ಶ್ರೀನಿವಾಸ್ ಮಾನೆ, ಎಂಎಲ್ಸಿ ದಿನೇಶ್ ಗೂಳಿಗೌಡ, ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಉಪಸ್ಥಿತರಿದ್ದರು.

Similar News