ಅಕ್ಕಿ ಕೊಡಲ್ಲವೆಂದರೆ ನಮ್ಮ ತೆರಿಗೆ ವಾಪಸ್ಸು ಕೊಡಿ: ಕೇಂದ್ರದ ವಿರುದ್ಧ ಶಾಸಕ ಶಿವಲಿಂಗೇಗೌಡ ಆಕ್ರೋಶ

''ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ''

Update: 2023-06-16 13:37 GMT

ಬೆಂಗಳೂರು, ಜೂ. 16: ‘ಕೇಂದ್ರ ಸರಕಾರದಿಂದ ನಾವೂ ಅಕ್ಕಿ ಉಚಿತವಾಗಿ ಕೊಡಿ ಎಂದು ಕೇಳುತ್ತಿಲ್ಲ,  ಬದಲಾಗಿ, ದರ ಪಾವತಿ ಮಾಡುತ್ತೇವೆ. ಒಂದು ವೇಳೆ ಹೀಗೆ, ನಡೆದುಕೊಂಡರೆ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಎಚ್ಚರಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ಸ್ಥಗಿತಗೊಳಿಸುವುದಿಲ್ಲ. ಬಡವರಿಗೆ 10 ಕೆ.ಜಿ ಅಕ್ಕಿ ಕೊಟ್ಟೆ ಕೊಡುತ್ತೇವೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಹೀಗೆ ಬಡವಿರೋಧಿ ಧೋರಣೆ ಮುಂದುವರೆಸಿದರೆ, ಲೋಕಾಸಭೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ತಿಳಿಸಿದರು.

‘ಅಲ್ಲದೆ, ಕೇಂದ್ರ ಸರಕಾರವೂ ರಾತ್ರಿ ಅಕ್ಕಿ ಕೊಡುತ್ತೇವೆಂದು ಹೇಳಿ, ಬೆಳಗ್ಗೆ ಅಕ್ಕಿ ಇಲ್ಲ ಎಂದಿದೆ. ಇವರು ನಮ್ಮಿಂದ ತೆರಿಗೆ ತೆಗೆದುಕೊಳ್ಳುವುದಿಲ್ಲವೇ?. ಹಾಗಾದರೆ ನಮ್ಮ ತೆರಿಗೆ ವಾಪಸ್ಸು ನೀಡಿ’ ಎಂದ ಅವರು, ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದ್ದು, ಯಾರೂ ಹಸಿವಿನಿಂದ ಇರಬಾರದೆಂರು.ಆದರೂ ಈಗ ಅಕ್ಕಿ ಇಲ್ಲವೆಂದರೆ ಹೇಗೆ?’ ಎಂದು ಪ್ರಶ್ನಿಸಿದರು.

ಕರ್ನಾಟಕ ಭಾರತದ ಒಕ್ಕೂಟ ವ್ಯವಸ್ಥೆ ಸೇರಿದೆ. ರಾಜ್ಯದ ಕ್ಷೇಮಾಭಿವೃದ್ಧಿಗೆ ಸ್ಪಂದಿಸುವ ಕೆಲಸ ಕೇಂದ್ರ ಸರಕಾರ ಮಾಡಬೇಕು. ಭಾರತೀಯ ಆಹಾರ ನಿಗಮ(ಎಫ್‍ಸಿಐ) ಮೂಲಕ 34ರೂ. ನಂತೆ ಅಕ್ಕಿ ಕೊಡುವಂತೆ ರಾಜ್ಯ ಸರಕಾರದಿಂದ ಕೇಳಿದ್ದೆವು. ಮೊದಲು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಅವರು ಈಗ ಇಲ್ಲ ಎಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Similar News