ಹಜ್ ಯಾತ್ರಿಕರ ಆರೈಕೆ ಮಾಡಿದ ಸ್ವಯಂ ಸೇವಕರಿಗೆ ಉಮ್ರಾ ಪ್ರವಾಸ: ಸಚಿವ ಝಮೀರ್ ಅಹಮದ್

Update: 2023-06-16 13:35 GMT

ಬೆಂಗಳೂರು: ಹಜ್ ಯಾತ್ರಿಗಳ ಆರೈಕೆ ಮಾಡಿದ ಸ್ವಯಂ ಸೇವಕರನ್ನು ವೈಯಕ್ತಿಕ ವೆಚ್ಚದಲ್ಲಿ ಪವಿತ್ರ ಉಮ್ರಾ ಪ್ರವಾಸಕ್ಕೆ ಕಳುಹಿಸುವುದಾಗಿ ವಸತಿ ಹಾಗೂ ಅಲ್ಪಸಂಖ್ಯಾತಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಶುಕ್ರವಾರ ಹಜ್ ಭವನಕ್ಕೆ ಭೇಟಿ ನೀಡಿ ಯಾತ್ರಿಗಳ ಜತೆ ಪ್ರಾರ್ಥನೆ ಸಲ್ಲಿಸಿ ಯಾತ್ರಿಗಳಿಗೆ ಶುಭ ಕೋರಿ ಮಾತನಾಡಿದ ಅವರು, ಕಳೆದ ಬಾರಿ 170 ಸ್ವಯಂ ಸೇವಕರನ್ನು  ಉಮ್ರಾ ಪ್ರವಾಸಕ್ಕೆ ಕಳುಹಿಸಲಾಗಿತ್ತು. ಉಳಿದ ಸುಮಾರು 100 ಸ್ವಯಂ ಸೇವಕರನ್ನು  ಈ ಬಾರಿ ಕಳುಹಿಸಲಾಗುವುದು ಎಂದು ಹೇಳಿದರು.

ಹಜ್ ಯಾತ್ರಿಗಳ ಆರೈಕೆ ನಿಜಕ್ಕೂ ಪುಣ್ಯದ ಕೆಲಸ. ಹದಿನೈದು ದಿನಗಳ ಕಾಲ ಯಾತ್ರಿಗಳು ಹಾಗೂ ಅವರ ಕುಟುಂಬದವರ ಯೋಗಕ್ಷೇಮ ನೋಡಿಕೊಳ್ಳುವ ಮೂಲಕ ನೀವು ಅಲ್ಲಾಹು ಕೃಪೆಗೆ ಪಾತ್ರರಾದಂತೆಯೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬಾರಿಯ ಹಜ್ ಯಾತ್ರೆ ವ್ಯವಸ್ಥೆ ಒಂದು ರೀತಿಯ ವಿಶಿಷ್ಟ ಅನುಭವ. ಅಚ್ಚುಕಟ್ಟಾಗಿ ನೆರವೇರಲು ಸ್ವಯಂ ಸೇವಕರ ಶ್ರಮಹೆಚ್ಚಾಗಿಡೆ.ಯಾತ್ರಿಕರ ಆಶೀರ್ವಾದ ಸಿಕ್ಕಿದ್ದು ನನ್ನ ಪುಣ್ಯ ಎಂದು ಸಂತಸ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಸಚಿವರು ಯಾತ್ರಿಕರ ಜತೆ ಸಂವಾದ ನಡೆಸಿ ಕುಟುಂಬ ಸದಸ್ಯರ ಜತೆ ಸಮಾಲೋಚನೆ ನಡೆಸಿದರು. ಸ್ವಯಂ ಸೇವಕರ ಕುಶಲೋಪರಿ ವಿಚಾರಿಸಿದರು.

ಯಾತ್ರಿಕರು ಹಾಗೂ ಅವರ ಕುಟುಂಬಸ್ಥರು ನಿತ್ಯ ಊಟ ತಿಂಡಿ ಸೇವಿಸುವ  ಸಭಾಂಗಣಕ್ಕೆ ಭೇಟಿ ನೀಡಿ ಆತಿಥ್ಯ ದ ಬಗ್ಗೆ ವಿಚಾರಿಸಿದರು. ಅಡುಗೆ ಕೋಣೆ ಸ್ವಚ್ಛವಾಗಿರಿಸುವಂತೆ ಸೂಚಿಸಿದರು.

ಹಜ್ ಖಾತೆ ಸಚಿವ ರಹೀಮ್ ಖಾನ್,  ಹಜ್ ಕಮಿಟಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸರ್ಫ್ ರಾಜ್ ಖಾನ್, ಹಜ್ ಕಮಿಟಿ ಅಧ್ಯಕ್ಷ ರೌಫ್ ಕಚೇರಿ ವಾಲಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Similar News