ಗೃಹ ಕಾರ್ಮಿಕರ ಪ್ರಗತಿಗೆ ಸರಕಾರ ಬದ್ಧ: ಸಚಿವ ಸಂತೋಷ್ ಲಾಡ್
ಬೆಂಗಳೂರು, ಜೂ. 16: ‘ಗೃಹ ಕಾರ್ಮಿಕರಿಗೆ ಸಮಗ್ರ ಕಾನೂನನ್ನು ಜಾರಿ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರಕಾರ ಗೃಹ ಕಾರ್ಮಿಕರ ಪ್ರಗತಿಗೆ ಬದ್ಧವಾಗಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಶುಕ್ರವಾರ ‘ಅಂತಾರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆ’ ಅಂಗವಾಗಿ ಕರ್ನಾಟಕ ಗೃಹ ಕಾರ್ಮಿಕರ ವೇದಿಕೆ ಇಲ್ಲಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಮುಂದಿನ ಬಜೆಟ್‍ನಲ್ಲಿ ಗೃಹ ಕಾರ್ಮಿಕರ ಹಿತರಕ್ಷಣೆಗೆ ಅಗತ್ಯವಾಗಿರುವ ಅಂಶಗಳು ಪ್ರಕಟವಾಗಲಿದೆ. ಕಾರ್ಮಿಕರ ಬೇಡಿಕೆಗಳನ್ನು ಸ್ಪಂದಿಸಲು ಸರಕಾರ ಬದ್ಧವಾಗಿದ್ದು, ಒಳ್ಳೆಯ ಕಾರ್ಯಕ್ರಮಗಳನ್ನೆ ಜಾರಿಗೆ ತರಲಾಗುವುದು’ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ವೇದಿಕೆಯ ಅಧ್ಯಕ್ಷೆ ಕೆ.ಮಾದೇವಿ ಮಾತನಾಡಿ, ‘ಉದ್ಯೋಗದಾತರ ಮನೆಯನ್ನು ಗೃಹ ಕಾರ್ಮಿಕರಿಗೆ ಕೆಲಸದ ಸ್ಥಳವೆಂದು ಘೋಷಿಸಿ ಮತ್ತು ಸುರಕ್ಷಿತ ಕೆಲಸದ ಸ್ಥಿತಿಯನ್ನು ಮತ್ತು ಮಹಿಳಾ ಕಾರ್ಮಿಕರನ್ನು ಲೈಂಗಿಕ ಕಿರುಕುಳದಿಂದ ಮುಕ್ತಗೊಳಿಸಬೇಕು’ ಎಂದು ಒತ್ತಾಯಿಸಿದರು.
ಅದೇ ರೀತಿ, ಇಎಸ್‍ಐ ಮತ್ತು ಪಿಎಫ್‍ನಲ್ಲಿ ಗೃಹ ಕಾರ್ಮಿಕರನ್ನು ಸೇರಿಸಿ ಮತ್ತು ಎಲ್ಲ ಸಾಮಾಜಿಕ ಭದ್ರತಾ ಕಲ್ಯಾಣ ಕ್ರಮಗಳನ್ನು ವಿಸ್ತರಿಸಬೇಕು. ಗೃಹ ಕಾರ್ಮಿಕರ ಅಗತ್ಯತೆಗಳನ್ನು ಪೂರೈಸಲು ನಿಧಿಯೊಂದಿಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಬೇಕು. ಶೂನ್ಯ ಹೊರಹಾಕುವಿಕೆ ಮತ್ತು ಗೃಹ ಕಾರ್ಮಿಕರಿಗೆ ವಸತಿ, ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಸಂಚಾಲಕಿ ಡಾ.ರೂತ್ ಮನೋರಮಾ, ಸಹ ಸಂಚಾಲಕಿ ಬೃಂದಾ ಅಡಿಗ ಸೇರಿದಂತೆ ಪ್ರಮುಖರಿದ್ದರು.