ಹಂಪಿಯಲ್ಲಿ ಜು.13ರಿಂದ ಜಿ-20 ಸಭೆ, 33 ದೇಶಗಳ ಮುಖ್ಯಸ್ಥರ ಪ್ರಧಾನ ಸಲಹೆಗಾರರು ಭಾಗಿ: ಸಚಿವ ಎಚ್.ಕೆ.ಪಾಟೀಲ್

Update: 2023-06-16 17:33 GMT

ಬೆಂಗಳೂರು, ಜೂ.16: ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಜು.13 ರಿಂದ 16ರ ವರೆಗೆ ನಡೆಯಲಿರುವ ಜಿ-20 ರಾಷ್ಟ್ರಗಳ ಪ್ರತಿನಿಧಿಗಳ ಸಭೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಜಿ-20 ರಾಷ್ಟ್ರಗಳ ಪ್ರತಿನಿಧಿಗಳ ಸಭೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿಯಲ್ಲಿ ನಡೆಯಲಿರುವ ಸಭೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಅಲ್ಲಿ ಏನೆಲ್ಲ ವ್ಯವಸ್ಥೆಗಳನ್ನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ ಎಂದರು.
ಜಿ-20 ಸಭೆಯಲ್ಲಿ 33 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಹಂಪಿಯಲ್ಲಿ ಸಮರ್ಪಕ ರಸ್ತೆ, ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯ ವ್ಯವಸ್ಥೆ ಮಾಡಬೇಕು. ದೇಶ, ವಿದೇಶದಿಂದ ಆಗಮಿಸುತ್ತಿರುವವರಿಗೆ ನಮ್ಮ ರಾಜ್ಯದ ಭವ್ಯ ಸಂಸ್ಕøತಿಯನ್ನು ಹೇಗೆ ಪರಿಚಯಿಸಬಹುದು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ನಾಳೆಯಿಂದಲೆ ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕೆಲಸಗಳು ನಡೆಯಲಿವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ವಿರೂಪಾಕ್ಷ ದೇವಸ್ಥಾನ, ಆನೆಗುಂದಿ, ವೀರಾಪುರ ಗಡ್ಡಿ, ಚಕ್ರತೀರ್ಥ, ಕೋದಂಡರಾಮ ದೇವಾಲಯ, ವಿಜಯ ವಿಠ್ಠಲ ದೇವಾಲಯ, ಪುರಂದರ ಮಂಟಪ, ಹಂಪಿ ವಿವಿಯ ಚಟುವಟಿಕೆಗಳ ಪರಿಚಯ ಸೇರಿದಂತೆ ನಮ್ಮ ನಾಡಿನ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಹಾಗೂ ಪ್ರಾಚೀನ ಆಕರ್ಷಣೀಯ ಸ್ಥಳಗಳನ್ನು ವಿದೇಶಿ ಗಣ್ಯರು ನೋಡುವಂತೆ ವ್ಯವಸ್ಥೆ ಮಾಡಲಾಗುವುದು. ಈ ಅಂತರ್‍ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಕ್ಕೆ ಸುಮರು 47.66 ಕೋಟಿ ರೂ.ಗಳು ವೆಚ್ಚವಾಗಬಹುದು ಎಂದು ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.

ಹಂಪಿಯಲ್ಲಿನ ಸಭೆಯ ಬಳಿಕ ಆ.1 ಹಾಗೂ 2ರಂದು ಮೈಸೂರು, ಆ.16 ರಿಂದ 18ರವರೆಗೆ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಆ.19ರಂದು ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್‍ನ ಸಚಿವರ ಹಂತದ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ಜಿಎಸ್ಟಿ ಕಾನೂನು ಪುನರ್ ಪರಿಶೀಲನೆಗೆ ಸೂಚನೆ: ಜಿಎಸ್ಟಿ ಕಾನೂನು ವಿಚಾರವಾಗಿಯೂ ಅಧಿಕಾರಿಗಳೊಂದಿಗೆ ಇವತ್ತು ಸಭೆ ನಡೆಸಲಾಯಿತು. ಮುಂದಿನ ವಾರ ಮತ್ತೊಂದು ಸಭೆ ನಡೆಸಲಾಗುವುದು. ಜಿಎಸ್ಟಿ ವಿಚಾರವಾಗಿ ನಮ್ಮ ಇಲಾಖೆ ಆತಂಕ ವ್ಯಕ್ತಪಡಿಸಿದೆ. ತಪ್ಪು ಮಾಹಿತಿ ಕೊಡುವವರಿಗೆ ಕಾನೂನು ಸಡಲಿಕೆ ನೀಡುವುದು ಸರಿಯಲ್ಲ. ಜಿಎಸ್ಟಿ ಕಾನೂನು ಪುನರ್ ಪರಿಶೀಲನೆ ಮಾಡಲು ನಾವು ಮೂರು ಸಲಹೆಗಳನ್ನು ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ಜಿಎಸ್ಟಿ ರಿಟನ್ರ್ಸ್ ಸಲ್ಲಿಕೆಗೆ ದಿನಾಂಕ ನಿಗದಿ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ಸಭೆಯಲ್ಲಿ ಚರ್ಚಿಸಿದ್ದೇವೆ. ಜಿಎಸ್ಟಿ ಸಲ್ಲಿಕೆಯಾಗಿರುವ ಮಾಹಿತಿ, ದಾಖಲೆಗಳನ್ನು ಪಡೆಯಲು ಸರಳೀಕರಣ ವಿಧಾನ ಅನುಸರಿಸುವ ಬಗ್ಗೆ ಚರ್ಚಿಸಲಾಗಿದೆ. ಆರ್‍ಟಿಐ ಅಡಿಯಲ್ಲಿ ಈ ಮಾಹಿತಿಗಳು ಲಭ್ಯವಿದೆ. ಆದರೂ ಅಗತ್ಯ ದಾಖಲೆ ಮತ್ತು ಮಾಹಿತಿಗಾಗಿ ಸರಳೀಕರಣ ವಿಧಾನ ರೂಪಿಸುವ ಬಗ್ಗೆಯೂ ಚರ್ಚೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

ಬಡವರ ಕಲ್ಯಾಣ ಮಾಡಿದರೆ ಸರಕಾರ ದಿವಳಿಯಾಗುತ್ತೆ ಎಂದು ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಒಂದು ವರ್ಷ ಆದ ಮೇಲೆ ಬಿಜೆಪಿಯವರಿಗೆ ನಿರಾಸೆಯಾಗಲಿದೆ. ನಾವು ಗ್ಯಾರಂಟಿ ಜಾರಿ ಮಾಡಲು ಆಗುತ್ತಿಲ್ಲ ಎಂಬುದು ಸುಳ್ಳು. ಬಿಜೆಪಿ ಸುಮ್ಮನೆ ಜನರ ಸಮಯವನ್ನು ಹಾಳು ಮಾಡುತ್ತಿದೆ ಎಂದು ಅವರು ಟೀಕಿಸಿದರು.

Similar News