ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯ: ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಜೂ. 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂದು ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.
ದೇಶದ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಒಂದಾಗಿರುವ ರಾಯಚೂರಿನಲ್ಲಿ ಆರೋಗ್ಯ, ಶಿಕ್ಷಣದ ಮಟ್ಟ ಮತ್ತು ತಲಾ ಆದಾಯವು ಇತರ ಪ್ರದೇಶಗಳಿಗಿಂತ ಕಡಿಮೆ ಇದೆ. ವಿಪರೀತ ಹವಾಗುಣ. ಭೌಗೋಳಿಕವಾಗಿಯೂ ಪ್ರತಿಕೂಲ ವಾತಾವರಣ ಹೊಂದಿದೆ. ಈ ಎಲ್ಲ ಕಾರಣಗಳಿಂದಾಗಿ ರಾಯಚೂರಿನಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದೆ. ಏಮ್ಸ್ ಸ್ಥಾಪನೆಯಿಂದ ಈ ಭಾಗದಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯ ಒದಗಿಸಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಏಮ್ಸ್ ಸ್ಥಾಪನೆಗೆ ಈ ಭಾಗದ ಜನತೆ ಹಾಗೂ ಜನಪ್ರತಿನಿಧಿಗಳ ಬೇಡಿಕೆ ಹೆಚ್ಚುತ್ತಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಮ್ಮ ಅತ್ಯಾದ್ಯತೆಯ ವಿಷಯವಾಗಿದೆ. ಆದ್ದರಿಂದ ಸಂಬಂಧಿಸಿದವರಿಗೆ ಈ ಕುರಿತು ಕ್ರಮ ವಹಿಸಲು ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರನ್ನು ಪತ್ರದಲ್ಲಿ ಕೋರಿದ್ದಾರೆ.
ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಅವರು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.