ಬೆಂಗಳೂರು | ಐಟಿ ಕಂಪೆನಿಗೆ ಬಾಂಬ್ ಬೆದರಿಕೆ ಪ್ರಕರಣ: ಆರೋಪಿ ನವನೀತ್ ಪ್ರಸಾದ್ ಬಂಧನ

Update: 2023-06-17 14:38 GMT

ಬೆಂಗಳೂರು, ಜೂ.17: ರಾಜಧಾನಿ ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಐಟಿ ಕಂಪನಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಂಪನಿಯ ಮಾಜಿ ಉದ್ಯೋಗಿ ನವನೀತ್ ಪ್ರಸಾದ್ ಬಂಧಿತ ಆರೋಪಿಯಾಗಿದ್ದು, ಜೂ.13 ರಂದು ಬೆಳ್ಳಂದೂರಿನಲ್ಲಿರುವ ಐಟಿ ಕಂಪನಿಗೆ ಕರೆ ಮಾಡಿದ್ದ ಅನಾಮಿಕ ‘ಕಂಪೆನಿಯಲ್ಲಿ ಬಾಂಬ್ ಇಟ್ಟಿದ್ದು ಕೆಲ ಹೊತ್ತಿನಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ' ಎಂದಿದ್ದ.

ಆತಂಕಗೊಂಡು ಕಾರ್ಯಪ್ರವೃತ್ತರಾದ ಕಂಪೆನಿ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ತಂಡ ಬಂದು ಪರಿಶೀಲನೆ ನಡೆಸಿದಾಗ ಅದೊಂದು ಹುಸಿ ಬಾಂಬ್ ಕರೆ ಎಂದು ಖಚಿತವಾಗಿತ್ತು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಬಾಂಬ್ ಕರೆ ಬಂದ ಮೊಬೈಲ್ ನಂಬರ್ ಪರಿಶೀಲಿಸಿದಾಗ ಕಂಪನಿಯ ಮಾಜಿ ಉದ್ಯೋಗಿಯಾಗಿರುವ ನವನೀತ್ ಪ್ರಸಾದ್ ಕರೆ ಮಾಡಿರುವುದು ತಿಳಿದು ಬಂದಿತ್ತು.

ಟೀಂ ಲೀಡರ್ ಹಾಗೂ ಆರೋಪಿ ನವನೀತ್ ನಡುವೆ ಜಗಳವಾಗಿತ್ತು. ಈ ವೇಳೆ, ಆರೋಪಿ ತಾನು ಕಂಪನಿಯ ಎಂ.ಡಿ. ಅವರನ್ನು ಭೇಟಿಯಾಗಬೇಕು ಎಂದಿದ್ದ. ಆದರೆ, ಭೇಟಿಗೆ ಅವಕಾಶ ನೀಡದೇ ಕೆಟ್ಟ ನಡವಳಿಕೆ ಕಾರಣ ನೀಡಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ನವನೀತ್ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಕಂಪನಿ ಸಿಬ್ಬಂದಿ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.

Similar News