ಬಿಜೆಪಿಯ ಸಂವಿಧಾನ ವಿರೋಧಿ ತಾರತಮ್ಯ ನೀತಿಯನ್ನು ಅಳಿಸಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಹತ್ಯೆಗೀಡಾದ ದೀಪಕ್, ಫಾಝಿಲ್ ಸೇರಿ 6 ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸಿದ ಸಿಎಂ

Update: 2023-06-19 10:06 GMT

ಬೆಂಗಳೂರು, ಜೂನ್ 19: ಸರ್ಕಾರ ಸರ್ವರಿಗೂ ಸೇರಿದ್ದು. ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಬಿಜೆಪಿ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಹತ್ಯೆಗೀಡಾದ ಮಸೂದ್‌, ಮಹಮ್ಮದ್‌ ಫಾಝಿಲ್‌, ಅಬ್ದುಲ್‌ ಜಲೀಲ್‌ ಹಾಗೂ ದೀಪಕ್‌ ರಾವ್‌, ಮಂಡ್ಯದ ಇದ್ರೀಸ್ ಪಾಶಾ, ನರಗುಂದದ ಶಮೀರ್ ಕುಟುಂಬದವರಿಗೆ 25 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.

ಬಿಜೆಪಿಯ ದ್ವೇಷ ಮತ್ತು ತಾರತಮ್ಯದ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲೇ ಧ್ವನಿ ಎತ್ತಿದ್ದೆ. ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಹಿಂದಿನ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಬಿಜೆಪಿ ಪರಿವಾರ ಮಾಡಿದ ತಾರತಮ್ಯವನ್ನು ಸರಿ ಪಡಿಸಿದ್ದೇವೆ ಎಂದರು. 

ನಮ್ಮ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ಅನೈತಿಕ ಪೊಲೀಸ್ ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡ್ತೀವಿ. ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದರು. 

ಈ ಸಂದರ್ಭದಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ಝಮೀರ್ ಅಹಮದ್ ಖಾನ್, ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಗೋವಿಂದರಾಜು ಸೇರಿ ಇತರೆ ನಾಯಕರು ಉಪಸ್ಥಿತರಿದ್ದರು.

Full View

Similar News