ಹತ್ಯೆಗೀಡಾದ ಫಾಝಿಲ್ ಸಹಿತ 6 ಮಂದಿಯ ಮನೆಯವರಿಗೆ ಸರಕಾರಿ ಕೆಲಸ: ಸಿಎಂ ಸಿದ್ದರಾಮಯ್ಯ ಘೋಷಣೆ

Update: 2023-06-19 09:23 GMT

ಬೆಂಗಳೂರು: ದ್ವೇಷದ ರಾಜಕಾರಣದಿಂದಾಗಿ ಕೊಲೆಗೀಡಾಗಿದ್ದ ಆರು ಮಂದಿ ಯುವಕರ ಮನೆಯವರಿಗೆ ಸರಕಾರಿ ಕೆಲಸ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಘೋಷಣೆ ಮಾಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಹತ್ಯೆಗೀಡಾದ ಮಸೂದ್‌, ಮಹಮ್ಮದ್‌ ಫಾಝಿಲ್‌, ಅಬ್ದುಲ್‌ ಜಲೀಲ್‌ ಹಾಗೂ ದೀಪಕ್‌ ರಾವ್‌ ಹಾಗೂ ಮಂಡ್ಯದ ಇದ್ರೀಸ್ ಪಾಶಾ, ನರಗುಂದದ ಶಮೀರ್ ಕುಟುಂಬದವರಿಗೆ ತಲಾ 25 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಅವರು ಮಾತನಾಡಿದರು.

'ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಹಿಂದಿನ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಬಿಜೆಪಿ ಪರಿವಾರ ಮಾಡಿದ ತಾರತಮ್ಯವನ್ನು ಸರಿ ಪಡಿಸಿದ್ದೇವೆ. ಹಿಂದೂ, ಮುಸ್ಲಿಂ, ಯಾವುದೇ ಧರ್ಮದವರೂ ಕೋಮುದ್ವೇಷಕ್ಕೆ ಬಲಿಯಾಗಬಾರದು' ಎಂದರು. 

'ನಮ್ಮ ಅವಧಿಯಲ್ಲಿ ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಮಾಡಿಸ್ತೇವೆ.  ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ಅನೈತಿಕ ಪೊಲೀಸ್ ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡ್ತೀವಿ. ಕಠಿಣ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ' ಎಂದರು.  

ಈ ಸಂದರ್ಭದಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ಝಮೀರ್ ಅಹ್ಮದ್ ಖಾನ್, ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್, ಗೋವಿಂದರಾಜು ಸೇರಿ ಇತರೆ ನಾಯಕರು ಉಪಸ್ಥಿತರಿದ್ದರು.

Full View

Similar News