ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆಗೆ 12 ವಾರಗಳ ಕಾಲಾವಕಾಶ ನೀಡಿದ ಹೈಕೋರ್ಟ್

Update: 2023-06-19 15:57 GMT

ಬೆಂಗಳೂರು, ಜೂ.19: ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆಗೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ 12 ವಾರಗಳ ಕಾಲಾವಕಾಶ ನೀಡಿದೆ.

ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ಗೊಂದಲಗಳಿದ್ದು, ಈ ಸಂಬಂಧ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಬಿಜೆಪಿಯ ಮಂಜುನಾಥ್ ರೆಡ್ಡಿ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ಅವರು ವಾದಿಸಿ, ಬಿಬಿಎಂಪಿಗೆ ಚುನಾವಣೆ ನಡೆಸುವುದು ತುರ್ತು ಅತ್ಯಗತ್ಯವಿದೆ. ಆದರೆ, ಈ ಹಿಂದೆ ನಡೆಸಿರುವ ವಾರ್ಡ್ ಪುನರ್ ವಿಂಗಡಣೆಯಲ್ಲಿ ಹಲವು ಲೋಪಗಳಿದ್ದು, ಹೊಸದಾಗಿ ವಾರ್ಡ್‍ಗಳ ಪುನರ್‍ವಿಂಗಡಣೆ ಅನಿವಾರ್ಯವಿದೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಅಲ್ಲದೆ, ಬಿಬಿಎಂಪಿ ವಾರ್ಡ್ ಪುನರ್‍ವಿಂಗಡಣೆಯಲ್ಲಿ ಹಲವು ಲೋಪಗಳಿವೆ. ಅವುಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ. ಹೀಗಾಗಿ ಮತ್ತಷ್ಟು ಚುನಾವಣೆ ನಡೆಸಲು ಕಾಲಾವಕಾಶ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೆಲ ವಾರ್ಡ್‍ಗಳ ಮತದಾರರನ್ನು ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ವಿಭಜನೆ ಮಾಡಿದ್ದಾರೆ. ಇದರಿಂದಾಗಿ ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಲಿದೆ. ಹೀಗಾಗಿ ಅಧಿಸೂಚನೆ ರದ್ದು ಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ಮುಂದಿನ 12 ವಾರಗಳಲ್ಲಿ ಕ್ಷೇತ್ರ ಪುನರ್‍ವಿಂಗಡಣೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

Similar News