ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

Update: 2023-06-19 17:43 GMT

ಬೆಂಗಳೂರು, ಜೂ.19: ನಗರದ ಮಹದೇವಪುರ ವಲಯ ವ್ಯಾಪ್ತಿಯ ದೊಡ್ಡಾನೆಕುಂದಿ ಹಾಗೂ ಹೊಯ್ಸಳ ನಗರ ವ್ಯಾಪ್ತಿಯಲ್ಲಿ ಸೋಮವಾರದಂದು ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿದರು. 

ಮಹದೇವಪುರ ವಲಯ ದೊಡ್ಡಾನೆಕುಂದಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸರ್ವೇ ಸಂ. 24/1, 3, 4 ಮತ್ತು 5ರ ಫರ್ನ್ ಸಿಟಿಯಲ್ಲಿ ಹಾದುಹೋಗಿರುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಸುಮಾರು 200 ಮೀಟರ್ ಉದ್ದದ ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಕಾಂಪೌಂಡ್ ಗೋಡೆ, ಕ್ಲಬ್ ಹೌಸ್ ಕಟ್ಟಡ, ಸ್ವಿಮ್ಮಿಂಗ್ ಫೂಲ್, ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‍ಟಿಪಿ), ಕಟ್ಟಡ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ. 

ಫರ್ನ್ ಸಿಟಿ ಪಕ್ಕದ ಸ್ಥಳದಲ್ಲಿ ಸುಮಾರು 200 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ ಖಾಲಿ ಸ್ಥಳ, ಗೌಡ್ರು ರಾಜಣ್ಣ ಹೋಟೆಲ್ ಶೆಡ್ ಅನ್ನು ಬಿಬಿಎಂಪಿ ವತಿಯಿಂದ ತೆರವುಗೊಳಿಸಲಾಯಿತು. ಅದೇ ಸ್ಥಳದ ಭಗಿನಿ ಹೋಟೆಲ್ ಅನ್ನು ತೆರವುಗೊಳಿಸಲು ಮುಂದಾದಾಗ ಹೋಟೆಲ್ ನವರೇ ಸ್ವಯಂ ತೆರವುಗೊಳಿಸಿಕೊಳ್ಳುವುದಾಗಿ ತಿಳಿಸಿದ್ದು, ಈ ಪೈಕಿ ತ್ವರಿತವಾಗಿ ತೆರವು ಮಾಡಲು ಅಧಿಕಾರಿಗಳು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದರು. 

ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವ್ಯಾಪ್ತಿಯಲ್ಲಿ ರಾಜಕಾಲುವೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ ಭೂಮಾಪಕರ ಮುಖಾಂತರ ಗಡಿ ಗುರುತಿಸಿ, ತಹಶೀಲ್ದಾರ್ ಮೂಲಕ ಒತ್ತುವರಿ ಮಾಡಿರುವವರಿಗೆ ಆದೇಶಗಳನ್ನು ಜಾರಿಗೊಳಿಸಿ ಹಂತ-ಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. 

ಪಾಲಿಕೆ ಅಭಿಯಂತರರು, ಭೂಮಾಪಕರು, ತಹಶೀಲ್ದಾರ್ ರವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಒತ್ತುವರಿ ತೆರವು ಸ್ಥಳದಲ್ಲಿ ಅಧಿಕಾರಿ, ಸಿಬ್ಬಂದಿಗಳ ಭದ್ರತೆಗಾಗಿ 40ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿದ್ದು, 1 ಹಿಟಾಚಿ ಹಾಗೂ 10 ಗ್ಯಾಂಗ್ ಮ್ಯಾನ್‍ಗಳ ಸಹಯೋಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ವಲಯ ಮುಖ್ಯ ಅಭಿಯಂತರ ಲೋಕೇಶ್ ಮಾಹಿತಿ ನೀಡಿದರು.

ಕೆ.ಆರ್.ಪುರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ: ಕೆ.ಆರ್.ಪುರಂ, ಹೊರಮಾವು ಉಪವಿಭಾಗದ ಹೊಯ್ಸಳ ನಗರ ಮುಖ್ಯರಸ್ತೆಯ ಪಕ್ಕದಲ್ಲಿ ಹಾದುಹೋಗುವ ರಾಜಕಾಲುವೆ ಮೇಲೆ ಸುಮಾರು 200 ಅಡಿ ಉದ್ದ ರಾಜಕಾಲುವೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ 4 ಮಳಿಗೆಗಳು ಹಾಗೂ 1 ಕಾರ್ ಸರ್ವೀಸ್ ಸ್ಟೇಷನ್ ಅನ್ನು ತೆರವುಗೊಳಿಸಲಾಗಿದೆ.

ಬಿಜೆಪಿ ಮುಖಂಡ ಅಡ್ಡಿ: ಇದೇ ವೇಳೆ ಬಿಬಿಎಂಪಿ ಅಧಿಕಾರಿಗಳು ತೆರವಿಗೆ ಮುಂದಾದಾಗ, ಬಿಜೆಪಿ ಮುಖಂಡ ನಂದೀಶ್ ರೆಡ್ಡಿ ಜೆಸಿಬಿಯ ಬೀಗ ಕಿತ್ತುಕೊಂಡು ಅಡ್ಡಿಪಡಿಸಿದರು. ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ರಾಜಕೀಯ ಮಾಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಫನ್ರ್ಸ್ ಸಿಟಿಯಲ್ಲಿ ಹೆಚ್ಚು ಬಿಜೆಪಿ ಮತದಾರರು ಇದ್ದಾರೆ. ಹೀಗಾಗಿಯೇ ಏಕಾಏಕಿ ಒತ್ತುವರಿ ತೆರವು ಮಾಡಲಾಗುತ್ತಿದೆ. ದೊಡ್ಡಾನೆಕುಂದಿ ಕೆರೆ ಆರಂಭದಿಂದ ಸರ್ವೆ ಮಾಡಿಕೊಂಡು ಬನ್ನಿ, ಅದು ಬಿಟ್ಟು ಹೀಗೆ ಮಧ್ಯದಲ್ಲಿ ತೆರವು ಮಾಡುವುದು ಸರಿಯಲ್ಲ ಎಂದರು.

ಮೊದಲು ಮಾರ್ಕ್ ಮಾಡಿ ಬಳಿಕ ಪಕ್ಷಪಾತ ಮಾಡದೆ ಯಾರದ್ದೇ ಕಟ್ಟಡ ಇದ್ದರೂ ಒತ್ತುವರಿ ತೆರವು ಮಾಡಿ ಮಾಡಿ. ಅದನ್ನು ಬಿಟ್ಟು ಬಿಜೆಪಿ ಮತದಾರರು ಹೆಚ್ಚಿರುವ ಕಡೆ ಡೆಮಾಲಿಷನ್ ಮಾಡುವುದು ಸರಿಯಲ್ಲ. ನಾವು ಯಾರು ತೆರವು ಕಾರ್ಯಾಚಾರಣೆಯ ವಿರೋಧಿಗಳಲ್ಲ, ನನ್ನ ಜಾಗ ಇಲ್ಲಿ ಇಲ್ಲ, ಇದ್ದರೂ ನ್ಯಾಯಯುತವಾಗಿ ತೆರವು ಮಾಡಿ ಅಧಿಕಾರಿಗಳನ್ನು ಒತ್ತಾಯಿಸಿದರು.

ಜೆಸಿಬಿ ಅಡ್ಡ ನಿಂತ ಮಹಿಳೆ: ಇನ್ನು ಫನ್ರ್ಸ್ ಸಿಟಿ ಮುಂಭಾಗ ಇದ್ದ ಮರ ತೆರವಿಗೆ ಮಹಿಳೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಪೊಲೀಸರ ಮಧ್ಯಸ್ಥಿಕೆಯಿಂದ ಮಹಿಳೆಯನ್ನು ಹೊರಗೆ ಕಳುಹಿಸಿ ತೆರವು ಮಾಡಿದರು.

Similar News