ಕೆಎಸ್‍ಎನ್‍ಡಿಎಲ್ ಪ್ರಧಾನ ಕಚೇರಿ ಮೇಲೆ ಲೋಕಾಯುಕ್ತರ ದಾಳಿ; ಪರಿಶೀಲನೆ
ಬೆಂಗಳೂರು, ಜೂ.19: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದಲ್ಲಿ(ಕೆಎಸ್‍ಎನ್‍ಡಿಎಲ್) ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ಪರಿಶೀಲನೆ ನಡೆಸಿದ್ದಾರೆ.
ಕೆಎಸ್‍ಎನ್‍ಡಿಎಲ್ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಆಗಿರುವ ಮಾಡಾಳ್ ವಿರುಪಾಕ್ಷಪ್ಪ ಅವಧಿಯಲ್ಲಿ ಸಾಬೂನು ಹಾಗೂ ಮಾರ್ಜಕ ತಯಾರಿಸಲು ರಾಸಾಯನಿಕ ಅಮದು ಮಾಡಿಕೊಳ್ಳಲು ಕರೆಯಲಾಗಿದ್ದ ಟೆಂಡರ್‍ನಲ್ಲಿ ಅವ್ಯವಹಾರ ನಡೆದಿರುವ ವಿಚಾರವಾಗಿ ಶಿವಶಂಕರ್ ಸೇರಿದಂತೆ ಹಲವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಲಯದಿಂದ ಅನುಮತಿ ಪಡೆದು ಓರ್ವ ಡಿವೈಎಸ್ಪಿ ಹಾಗೂ 10 ಮಂದಿ ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ ಕೆಎಸ್‍ಡಿಎಲ್ ಪ್ರಧಾನ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳಲಾಯಿತು.
ದಾಳಿಯ ಹಿನ್ನೆಲೆ: ಮಾಡಾಳ್ ವಿರುಪಾಕ್ಷಪ್ಪ ಆಡಳಿತ ಅವಧಿಯಲ್ಲಿ ಟೆಂಡರ್ ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿತ್ತು. ಅಲ್ಲದೆ ಮಾಡಾಳ್ ಪುತ್ರ ಪ್ರಶಾಂತ್ ಮಾಡಾಳ್ ಟೆಂಡರ್ ನೀಡಲು ಗುತ್ತಿಗೆದಾರರಿಂದ ಲಕ್ಷಾಂತರ ರೂ.ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ತನಿಖೆ ವೇಳೆ ತಂದೆ ಮಾಡಾಳ್ ವಿರುಪಾಕ್ಷಪ್ಪ ಕೈವಾಡವಿರುವ ಬಗ್ಗೆಯೂ ಅನುಮಾನ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಆಧರಿಸಿ ಎಪ್ರಿಲ್‍ನಲ್ಲಿ ಮಾಡಾಳ್ ವಿರುಪಾಕ್ಷಪ್ಪನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ತನಿಖೆ ವೇಳೆ ಟೆಂಡರ್, ಕಚ್ಚಾವಸ್ತು ಸೇರಿ ಹಲವು ವಸ್ತುಗಳು ಖರೀದಿ ವಿಚಾರದಲ್ಲಿ ಅವ್ಯವಹಾರ ನಡೆದಿರುವುದು ತಿಳಿದುಬಂದಿತ್ತು. ಅಲ್ಲದೆ ಶಿವಶಂಕರ್ ಎಂಬುವರು ಕೆಎಸ್‍ಡಿಲ್‍ನಲ್ಲಿ ಭ್ರಷ್ಟಾಚಾರ ನಡೆದಿರುವ ಲೋಕಾಯುಕ್ತಕ್ಕೆ ದೂರು ನೀಡಿದ್ದರು.