ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ, ಆರೋಗ್ಯ ಅಭಿವೃದ್ಧಿಗೆ ನೀಲನಕ್ಷೆ: ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಜೂ.19: ಮುಂದಿನ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಹಾಗೂ ಅರೋಗ್ಯ ಒಳಗೊಂಡತೆ ನೀಲ ನಕ್ಷೆ ಸಿದ್ದಪಡಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದುಎಂದು ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸೋಮವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು, ಪ್ರಜಾಸತ್ತಾತ್ಮಕ ಹಾಗೂ ರಾಜಕೀಯ ಸಬಲೀಕರಣ ವೇದಿಕೆಯ ನಿಯೋಗದೊಂದಿಗೆ ಸಮಾಲೋಚನೆ ನಡೆಸಿದ ಅವರು, ಮೂವತ್ತು ವರ್ಷದ ಭವಿಷ್ಯದ ಗಮನದಲ್ಲಿಟ್ಟುಕೊಂಡು ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಿ ಕ್ರಿಯಾ ಯೋಜನೆಯೊಂದಿಗೆ ಕಾರ್ಯ ನಿರ್ವಹಿಸಲಾಗುವುದು. ಸರಕಾರದ ಹಂತದಲ್ಲಿ ರೂಪಿಸಬೇಕಾದ ಕಾರ್ಯಕ್ರಮಗಳು ಹಾಗೂ ಅದಕ್ಕಾಗಿ ಕೈಗೊಳ್ಳಬೇಕಿರುವ ನಿರ್ಧಾರಗಳ ಬಗ್ಗೆ ಅಧ್ಯಯನ ನಡೆಸಿ ಸಲಹೆ ನೀಡಲು ಒಂದು ತಂಡ ಸಹ ರಚಿಸಲಾಗುವುದು ಎಂದು ತಿಳಿಸಿದರು.
ಉನ್ನತ ಶಿಕ್ಷಣದಿಂದ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸಬೇಕು. ಈಗಾಗಲೇ ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗಿದೆ ಎಂದ ಅವರು, ಶಿಕ್ಷಣ ನಮಗೆ ಪ್ರಬಲ ಅಸ್ತ್ರ ಇದ್ದಂತೆ. ಎಲ್ಲ ಹಂತದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಸಿಗಬೇಕು ಎಂದು ನುಡಿದರು.
ಮನವಿ: ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಅಪೌಷ್ಟಿಕತೆ ಸೇರಿ ಹಲವು ಅರೋಗ್ಯ ಸಂಬಂಧಿತ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ವಿಶೇಷ ಗಮನ ನೀಡುವಂತೆ ನಿಯೋಗ ಸಮಾಲೋಚನೆ ಸಮಯದಲ್ಲಿ ಪ್ರಸ್ತಾಪ ಮಾಡಿತು. ಅ ಬಗ್ಗೆ ಗಮನ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ವಿವಿ ಹಂಗಾಮಿ ಕುಲಪತಿಯಾಗಿ ಪ್ರೊ.ಮುಝಫ್ಫರ್ ಅಸ್ಸಾದಿ, ಚಿಂತಕ ಮೆಹ್ರೋಝ್ ಖಾನ್ ಸೇರಿದಂತೆ ಪ್ರಮುಖರಿದ್ದರು.