ಮಳೆಯ ನಡುವೆಯೂ ಕಾಂಗ್ರೆಸ್ ಪ್ರತಿಭಟನೆ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ಕಿಡಿ
ರಾಜ್ಯಕ್ಕೆ ಅಕ್ಕಿ ನಿರಾಕರಣೆ ಆರೋಪ
ಬೆಂಗಳೂರು: ''ಹಸಿವು ಮುಕ್ತ ರಾಜ್ಯ ಮಾಡಲು ನಾವು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಅಡ್ಡಿಪಡಿಸಿದೆ'' ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಕೇಂದ್ರ ಬಿಜೆಪಿ ಸರಕಾರದ ಬಡವರ ಅನ್ನ ವಿರೋಧಿ ನೀತಿ ವಿರುದ್ಧ ಇಲ್ಲಿನ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಬಳಿ ಮಳೆಯ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಡಿಕೆಶಿ, 'ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ನಾವು ಬೇರೆ ರಾಜ್ಯಗಳಿಂದ ಖರೀದಿ ಮಾಡಿ ನೀಡುತ್ತೇವೆ. ಅದಕ್ಕೆ ಸರ್ಕಾರ ಹಾಗೂ ಮಂತ್ರಿಗಳು ಬೇರೆ ರಾಜ್ಯಗಳ ಜೊತೆ ಸಂಪರ್ಕ ಮಾಡುತ್ತಿದ್ದಾರೆ' ಎಂದರು.
'ಬಡವರ ಹೊಟ್ಟೆ ತುಂಬುವ ವಿಚಾರದಲ್ಲಿ ಕೇಂದ್ರ ಸರ್ಕಾರದ ರಾಜಕಾರಣದ ವಿರುದ್ಧ ಇಂದು ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ. ಸೋನಿಯಾ ಗಾಂಧಿ ಅವರು ಯುಪಿಎ ಸರ್ಕಾರದ ಅಧ್ಯಕ್ಷರಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿ ನಮಗೆ ಆಹಾರವನ್ನು ಸಂವಿಧಾನಬದ್ಧ ಹಕ್ಕಾಗಿ ನೀಡಿದರು. ಆ ಸಂವಿಧಾನದ ಹಕ್ಕಿನ ಮೂಲಕ ನಾವು ದೇಶದ ಜನರಿಗೆ ಅಕ್ಕಿ ಹಂಚಲಾಗುತ್ತಿದೆ' ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಚಿವ ರಾಮಲಿಂಗಾ ರೆಡ್ಡಿ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಮಾಜಿ ಸಚಿವೆ ರಾಣಿ ಸತೀಶ್ ಮತ್ತಿತರರು ಭಾಗವಹಿಸಿದ್ದರು.