ಬೊಮ್ಮಾಯಿ ಅವರ ಧಮ್ಮು, ತಾಕತ್ತಿಗೆ ಜನ ಉತ್ತರ ಕೊಟ್ಟಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-06-20 13:41 GMT

ಬೆಂಗಳೂರು, ಜೂ.20: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಧಮ್ಮು, ತಾಕತ್ತಿಗೆ ಜನ ಈಗಾಗಲೆ ಉತ್ತರ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಜ್ಯದ ಜನರಿಗೆ ಐದು ಗ್ಯಾರಂಟಿ ನೀಡಿದ್ದು, ಅದರಲ್ಲಿ ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುವುದಾಗಿ ವಾಗ್ದಾನ ನೀಡಿದ್ದೇವೆ. ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಗೆ ಭಾರತೀಯ ಆಹಾರ ನಿಗಮ ಆರಂಭದಲ್ಲಿ ಒಪ್ಪಿಗೆ ನೀಡಿತ್ತು. ಆದರೆ ರಾಜಕೀಯ ಉದ್ದೇಶದಿಂದ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ವಿಫಲಗೊಳಿಸಲು ಇದೀಗ ಅಕ್ಕಿ ನೀಡಲು ನಿರಾಕರಿಸಿದೆ ಎಂದು ಕಿಡಿಗಾರಿದರು.

ಆ ಮೂಲಕ ರಾಜ್ಯದ ಬಡವರಿಗೆ ಬಿಜೆಪಿಯ ಕೇಂದ್ರ ಸರಕಾರ ಮೋಸ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರದಿದ್ದರೆ ಕೇಂದ್ರದ ಯೋಜನೆ ಸ್ಥಗಿತ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಹೇಳಿದ್ದರು. ಈಗ ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಅಕ್ಕಿ ನೀಡದಿದ್ದರೂ ನಾವು ಬೇರೆ ರಾಜ್ಯಗಳ ಜತೆ ಮಾತನಾಡಿ ಅಲ್ಲಿಂದ ಅಕ್ಕಿ ಖರೀದಿ ಮಾಡುತ್ತೇವೆ. ಸ್ವಲ್ಪ ತಡವಾದರೂ ನಾವು ನಮ್ಮ ಯೋಜನೆ ಜಾರಿ ಮಾಡಿಯೆ ಮಾಡುತ್ತೇವೆ. ನಾವು ಈ ಯೋಜನೆಯಲ್ಲಿ ಕೇವಲ ಒಂದು ಪಕ್ಷದವರಿಗೆ ಮಾತ್ರ ಅಕ್ಕಿ ನೀಡುತ್ತಿಲ್ಲ. ಸರ್ವರಿಗೂ ಸಮಬಾಳು ಸಮಪಾಲು ಎಂಬಂತೆ ಪಕ್ಷ, ಧರ್ಮ ಭೇದವಿಲ್ಲದೆ ಎಲ್ಲರಿಗೂ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಒಂದು ವೇಳೆ ಕೇಂದ್ರ ಸರಕಾರ ಸಹಕಾರ ನೀಡಿದ್ದರೆ ಜನರ ಹೊಟ್ಟೆ ತುಂಬುತ್ತಿತ್ತು. ಅಕ್ಕಿ ನೀಡುವುದು ನಮ್ಮ ಜವಾಬ್ದಾರಿ. ಪಾರದರ್ಶಕವಾಗಿ ಅಕ್ಕಿ ಖರೀದಿ ಮಾಡಿ ಜನರಿಗೆ ನೀಡುತ್ತೇವೆ ಎಂದು ಶಿವಕುಮಾರ್ ಪುನರುಚ್ಚರಿಸಿದರು.

Similar News