ಬೆಂಗಳೂರು | ಭದ್ರತಾ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು

Update: 2023-06-20 13:34 GMT

ಬೆಂಗಳೂರು, ಜೂ.20: ರಾತ್ರಿ ವೇಳೆಯಲ್ಲಿ ಸೆಕ್ಯುರಿಟಿ ಗಾರ್ಡ್ ಮೇಲೆ ದುಷ್ಕರ್ಮಿಯೋರ್ವ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಆರ್.ಟಿ.ನಗರದ ಎಂಎಲ್‍ಎ ಲೇಔಟ್‍ನಲ್ಲಿ ನಡೆದಿದೆ. 

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದಿಂದ ಕೂಗಳತೆ ದೂರದಲ್ಲಿಯೇ ಘಟನೆ ನಡೆದಿದ್ದು, ಅಪರಿಚಿತ ಆರೋಪಿಯ ಕೃತ್ಯಕ್ಕೆ ಸೆಕ್ಯುರಿಟಿ ಗಾರ್ಡ್ ಅಲ್ಬರ್ಟ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಂಎಲ್‍ಎ ಲೇಔಟ್ 1ನೇ ಮುಖ್ಯರಸ್ತೆಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಆಲ್ಬರ್ಟ್ ಜೂ.18ರ ಭಾನುವಾರ ರಾತ್ರಿ ಕರ್ತವ್ಯದಲ್ಲಿದ್ದರು.

ಆರೋಪಿಯು ಸೆಕ್ಯುರಿಟಿ ಗಾರ್ಡ್ ಆಲ್ಬರ್ಟ್ ಕುಳಿತಿದ್ದ ಕುರ್ಚಿಯ ಹಿಂದೆ ಬಂದು ನಿಂತುಕೊಂಡಿದ್ದ. ಆರೋಪಿಯನ್ನು ಉದ್ದೇಶಿಸಿ ‘ಯಾರಪ್ಪ ನೀನು, ರಾತ್ರಿ ವೇಳೆ ಇಲ್ಲೆಲ್ಲಾ ಓಡಾಡಬಾರದು, ಕ್ಯಾಮೆರಾಗಳಿವೆ' ಎಂದು ಆಲ್ಬರ್ಟ್ ಹೇಳಿದ್ದರು. ಅಷ್ಟಕ್ಕೆ ಸಿಟ್ಟಿಗೆದ್ದ ಆರೋಪಿ ಅವಾಚ್ಯವಾಗಿ ನಿಂದಿಸಿ, ತನ್ನ ಬಳಿಯಿದ್ದ ಚಾಕುವಿನಿಂದ ಆಲ್ಬರ್ಟ್‍ರ ಎಡಗೆನ್ನೆ ಕೊಯ್ದು ಸ್ಥಳದಿಂದ ಪರಾರಿಯಾಗಿದ್ದಾನೆನ್ನಲಾಗಿದೆ.

ಸಾರ್ವಜನಿಕರೊಬ್ಬರ ಸಹಾಯದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಆಲ್ಬರ್ಟ್ ಆರ್.ಟಿ. ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. 

ಇನ್ನು ಸೆಕ್ಯುರಿಟಿ ಗಾರ್ಡ್ ಮೇಲೆ ಆರೋಪಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Similar News