ಕೆಲಸ ಮಾಡುತ್ತಿದ್ದ ಮನೆಯಲ್ಲೇ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಚಾಲಕನ ಬಂಧನ
ಬೆಂಗಳೂರು, ಜೂ.20: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಾರು ಚಾಲಕನೊಬ್ಬನನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಂಬಳಗೋಡಿ ನಿವಾಸಿ ಮುನಿರಾಜು(36) ಬಂಧಿತ. ಆರೋಪಿಯಿಂದ 4 ಲಕ್ಷ ರೂ. ಮೌಲ್ಯದ 67 ಗ್ರಾಂ ತೂಕದ ಚಿನ್ನಾಭರಣ, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ಪ್ರೆಸ್ಟೀಜ್ ಬಾಗ್ಮನೆ ಟೆಂಪಲ್ಬೆಲ್ಟ್ ಅಪಾರ್ಟ್ಮೆಂಟ್ ನಿವಾಸಿ ಕಾರ್ತಿಕ್ ಕಿರಣ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮುನಿರಾಜು ಕಳೆದ ಎರಡು ವರ್ಷಗಳಿಂದ ಕಾರ್ತಿಕ್ ಕಿರಣ್ ಅವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸಕ್ಕೆ ಬಂದಿದ್ದ ವೇಳೆ ಮನೆಯಲ್ಲಿ ಯಾರು ಇಲ್ಲದಿರುವಾಗ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಸಂಬಂಧ ಕಾರ್ತಿಕ್ ಕಿರಣ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಸಾಲದ ಸುಳಿಗೆ ಸಿಲುಕಿದ್ದ ಆರೋಪಿ ಮುನಿರಾಜು, ಸಾಲಗಾರರ ಕಾಟ ತಾಳಲಾರದೆ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.