ಬೆಂಗಳೂರಿನ ಕಮ್ಮನಹಳ್ಳಿ ಬಳಿ ಚರ್ಚ್ ಗೆ ನುಗ್ಗಿ ವಸ್ತುಗಳ ಧ್ವಂಸ: ಆರೋಪಿ ಸೆರೆ
ಬೆಂಗಳೂರು, ಜೂ.21: ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ ಸಂತ 10ನೆ ಭಕ್ತಿನಾಥರ ಚರ್ಚೆಗೆ ನುಗ್ಗಿ ಹೂವಿನ ಕುಂಡಗಳು ಹಾಗೂ ವೇದಿಕೆ ಮೇಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದು, ಈ ಸಂಬಂಧ ಯುವಕನೋರ್ವನನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಲಿಂಗರಾಜಪುರ ನಿವಾಸಿ ಟಾಮ್ ಮ್ಯಾಥ್ಯು (29) ಎಂಬಾತ ಬಂಧಿತ ಆರೋಪಿ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಚರ್ಚ್ ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಆರೋಪಿಯೂ, ಮೇಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದಾನೆ. ಬಳಿಕ ಹೂವಿನ ಕುಂಡಗಳನ್ನು ಒಡೆದಿದ್ದಾನೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೆಲವೇ ಕ್ಷಣಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಇನ್ನೂ, ಈತ 20 ವರ್ಷದಿಂದ ಕಮ್ಮನಹಳ್ಳಿ ಭಾಗದಲ್ಲಿ ನೆಲೆಸಿದ್ದ. ನಾಲ್ಕು ವರ್ಷದಿಂದ ಹಿಂದೆ ಈತನ ತಂದೆ ಮನೆ ಬಿಟ್ಟು ಹೋಗಿದ್ದರು. ಆ ವಿಷಯವನ್ನು ಆರೋಪಿ ಭಾವನಾತ್ಮಕವಾಗಿ ಹಂಚಿಕೊಂಡು ದುಃಖಿತನಾಗಿದ್ದ. ಅದೇ ಕೊರಗಿನಲ್ಲಿದ್ದ. ಆತನ ತಾಯಿ ಇದೇ ಚರ್ಚ್‍ಗೆ ಬಂದು ನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಜತೆಗೆ ಮೇಲ್ನೋಟಕ್ಕೆ ಈತ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿರುವುದು ಕಂಡುಬಂದಿದೆ ಎಂದು ಡಿಸಿಪಿ ಭೀಮಾ ಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.
ಆರೋಪಿ ಕೊಠಡಿಯಲ್ಲೂ ಮದ್ಯದ ಬಾಟಲಿಗಳು ದೊರೆತಿವೆ. ಆರೋಪಿಯನ್ನು ವಶಕ್ಕೆ ಪಡೆದು ಎಸಿಪಿ ನೇತೃತ್ವದ ತಂಡವು ವಿಚಾರಣೆ ನಡೆಸುತ್ತಿದೆ. ಈತನನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಮಾಹಿತಿ ನೀಡಿದರು.
ಪೊಲೀಸರ ಸಮಯಪ್ರಜ್ಞೆ: ಮೆಚ್ಚುಗೆ
‘ಚರ್ಚ್ ಮೇಲಿನ ದಾಳಿ ಕುರಿತು ತಕ್ಷಣವೇ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಚರ್ಚ್‍ನಲ್ಲಿ ಪುನಃ ಎಂದಿನಂತೆಯೇ ಇರುವ ವಾತಾವರಣ ನಿರ್ಮಾಣ ಮಾಡೋಣ’ ಎಂದು ಕ್ರೈಸ್ತ ಧರ್ಮದ ಬೆಂಗಳೂರು ಮಹಾಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೆ.ಎ.ಕಾಂತರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.