ಬಿಬಿಎಂಪಿ-ಬಿಡಿಎ ಬಹುಕೋಟಿ ಕಾಮಗಾರಿ ತನಿಖೆಗೆ ‘ಸಿಟ್’ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

''ಕಾಮಗಾರಿ ಪರಿಶೀಲಿಸದೇ ಬಿಲ್ ಪಾವತಿಸುವುದಿಲ್ಲ''

Update: 2023-06-21 16:30 GMT

ಬೆಂಗಳೂರು, ಜೂ.21: ಬಿಬಿಎಂಪಿ ಮತ್ತು ಬಿಡಿಎ ವ್ಯಾಪ್ತಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಕೈಗೊಳ್ಳಲಾದ ಕಾಮಗಾರಿಯ ಬಗ್ಗೆ ತನಿಖೆ ನಡೆಸಲು ಶೀಘ್ರದಲ್ಲಿಯೇ ಸಿಟ್(ವಿಶೇಷ ತನಿಖಾ ತಂಡ) ರಚನೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ನಡೆಸದೇ 123ಕೋಟಿ ರೂ., ಬಿಲ್ ಪಾವತಿ ಆಗಿರುವ ಬಗ್ಗೆ ಲೋಕಾಯುಕ್ತ ತನಿಖೆಯಲ್ಲಿ ದೃಢಪಟ್ಟಿದ್ದು, ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇನ್ನೂ, ಬಿಡಿಎನಲ್ಲಿಯೂ ಸಿಟ್ ರಚನೆ ಮಾಡಿ ತನಿಖೆ ಮಾಡುವ ಅವಶ್ಯಕತೆ ಇದೆ ಎಂದರು.

ಚುನಾವಣೆ ಪೂರ್ವದ ಆರು ತಿಂಗಳು ಮೊದಲೇ ಗುತ್ತಿಗೆದಾರರಿಗೆ ಕಾಮಗಾರಿ ತೆಗೆದುಕೊಳ್ಳದಂತೆ ಸೂಚನೆ ನೀಡಲಾಗಿತ್ತು. ಯೋಜನಾ ಮೊತ್ತ ದ್ವಿಗುಣವಾಗುತ್ತಿದೆ ಎಂದು ಎಚ್ಚರಿಸಲಾಗಿತ್ತು. ಇದೀಗ ಎಲ್ಲ ಕಾಮಗಾರಿ ಪರಿಶೀಲನೆ ಮಾಡಲು ತಡೆ ಹಿಡಿಯಲಾಗಿದೆ. ಎರಡು ಬಾರಿ ಪರಿಶೀಲನೆ ನಡೆಸಲಾಗುವುದು. ಎಲ್ಲವೂ ಸರಿಯಾಗಿದೆ ಎಂದು ದೃಢಪಟ್ಟರೆ ಮಾತ್ರ ಕಾಮಗಾರಿ ಆರಂಭಿಸುವುದಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

Similar News