ಮಂಗಳೂರು ಸೇರಿ 3 ಜಿಲ್ಲೆಗಳಲ್ಲಿ ಹಜ್ ಭವನ ನಿರ್ಮಾಣ: ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಜೂ.22: 'ರಾಜ್ಯದಿಂದ ಹಜ್ ಯಾತ್ರೆಗೆ ತೆರಳುವವರ ಅನುಕೂಲಕ್ಕಾಗಿ ಮುಂದಿನ ವರ್ಷಗಳಲ್ಲಿ ಮೂರು ಅಥವಾ ನಾಲ್ಕು ಜಿಲ್ಲೆಗಳಲ್ಲಿ ಹಜ್ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ' ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಗುರುವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಆಯೋಜಿಸಿದ್ದ ಹಜ್ ಯಾತ್ರಿಗಳ ಅಂತಿಮ ತಂಡದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
''ಮಂಗಳೂರಿನಲ್ಲಿ ಹಜ್ ಭವನ ನಿರ್ಮಿಸಲು ಈಗಾಗಲೆ ಭೂಮಿ ಗುರುತಿಸಲಾಗಿದೆ ಎಂದು ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಮಾಹಿತಿ ನೀಡಿದ್ದಾರೆ. ಹಜ್ ಸಚಿವರೊಂದಿಗೆ ಮಂಗಳೂರಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಮಂಗಳೂರಿನಲ್ಲಿ ಹಜ್‍ಭವನ ನಿರ್ಮಾಣವಾದರೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾತ್ರಿಗಳು ತೆರಳಲು ಅನುಕೂಲವಾಗುತ್ತದೆ'' ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫುದ್ದಿನ್ ಕಚೇರಿವಾಲಾ, ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಸರ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.