ಆರೋಗ್ಯ ಇಲಾಖೆ ಸುಧಾರಣೆಗಳ ಕುರಿತ ವರದಿ ಸಲ್ಲಿಕೆ: ಸಿಟ್ ರಚನೆ, ನಗರ ಪ್ರದೇಶದಲ್ಲೂ ವೈದ್ಯರ ಸೇವೆಗೆ ಶಿಫಾರಸ್ಸು

Update: 2023-06-22 16:29 GMT

ಬೆಂಗಳುರು, ಜೂ. 22: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯ್ ಭಾಸ್ಕರ್ ನೇತೃತ್ವದ ನಿಯೋಗವೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೈಗೊಳ್ಳಬಹುದಾದ ಆಡಳಿತ ಸುಧಾರಣೆಗಳ ಕುರಿತ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು, ವೈದ್ಯರು, ಸಾರ್ವಜನಿಕ ಆರೋಗ್ಯ ತಜ್ಞರು, ನರ್ಸಿಂಗ್‍ಅಧಿಕಾರಿ, ಆರೋಗ್ಯ ತಪಾಸಣಾ ಅಧಿಕಾರಿಗಳನ್ನು ಒಳಗೊಂಡ ವಿಭಾಗಿಯ ಮಟ್ಟದಲ್ಲಿ ಸಿಸ್ಟಂ ಇಂಪ್ರೂಮೆಂಟ್ ಟೀಮ್ (ಸಿಟ್) ರಚನೆ. ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಎಂಬಿಬಿಎಸ್ ವೈದ್ಯರನ್ನು ನಗರ ಪ್ರದೇಶಗಳಲ್ಲೂ ಬಳಕೆಗೆ ಶಿಫಾರಸ್ಸು ಮಾಡಲಾಗಿದೆ.

ಆರೋಗ್ಯ ಇಲಾಖೆಯಲ್ಲಿ ನರ್ಸರಿಂಗ್ ನಿರ್ದೇಶನಾಲಯ ಸ್ಥಾಪನೆ. ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಎಂಬಿಬಿಎಸ್ ವೈದ್ಯರನ್ನು ನಗರ ಪ್ರದೇಶಗಳಲ್ಲೂ ಬಳಕೆಗೆ ಸೂಚನೆ. ತಾಲೂಕು ಆಸ್ಪತ್ರೆಗಳಲ್ಲಿ ಒಳರೋಗಿಗಳು ಮತ್ತು ಹೆರಿಗೆಗಳ ಸಂಖ್ಯೆಯನ್ನು ಅವಲಂಬಿಸಿ, ಹೆಚ್ಚಿನ ಕೆಲಸದ ಹೊರೆ ಹೊಂದಿರುವ ತಾಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 50 ಹೊಸ ಸಾಮಾನ್ಯ ಹಾಸಿಗೆಗಳನ್ನು ಮಂಜೂರು ಮಾಡಲು ಶಿಫಾರಸ್ಸು ಮಾಡಲಾಗಿದೆ.

ಅದೇ ರೀತಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗ ತಜ್ಞ, ಮಕ್ಕಳ ವೈದ್ಯರು, ಅರಿವಳಿಕೆ ತಜ್ಞರು, ದಂತ ಶಸ್ತ್ರಚಿಕಿತ್ಸಕರು ವಾರಕ್ಕೊಮ್ಮೆ ಗಂಟೆಯ ಆಧಾರದ ಮೇಲೆ ಮತ್ತು ಮೂಳೆ ಚಿಕಿತ್ಸಕ, ಮನೋ ವೈದ್ಯರು, ಫಿಸಿಯೋಥೆರಪಿಸ್ಟ್, ಜೆರಿಯಾಟ್ರಿಶಿಯನ್ ತಿಂಗಳಿಗೊಮ್ಮೆ ಗಂಟೆಯ ಆಧಾರದ ಮೇಲೆ ತಜ್ಞರ ಸೇವೆಗಳನ್ನು ಪಡೆಯಲು ಎಆರ್‍ಎಸ್‍ಗೆ ಹಣವನ್ನು ಒದಗಿಸಬಹುದು ಎಂದೂ ಉಲ್ಲೇಖಿಸಲಾಗಿದೆ.

ಎಲ್ಲ್ಲ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಡಳಿತಾಧಿಕಾರಿಯ ಅಡಿಯಲ್ಲಿ ‘ಆಸ್ಪತ್ರೆ ವ್ಯವಸ್ಥಾಪಕರ’ ಹುದ್ದೆ ನೇಮಕ. ಎಎನ್‍ಎಂಗಳು ಮತ್ತು ಪುರುಷ ಆರೋಗ್ಯ ಕಾರ್ಯಕರ್ತರು ದ್ವಿ-ಚಕ್ರ ವಾಹನಗಳನ್ನು ಖರೀದಿಸಲು 20 ಕೋಟಿ ವೆಚ್ಚದಲ್ಲಿ ಶೇ.50ರ ಸಬ್ಸಿಡಿ. ಪ್ರತಿ ಬುಧವಾರ ತಾಯಿಯ ಆರೋಗ್ಯ, ಮರಣ ಪ್ರಮಾಣ ಕುರಿತು ಇಲಾಖೆಯಿಂದ ಸ್ಕ್ರೀನಿಂಗ್, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಜೆ ಕ್ಲಿನಿಕ್‍ಗಳನ್ನುಆರಂಭಿಸಲು ಶಿಫಾರಸ್ಸು ಮಾಡಲಾಗಿದೆ.

Similar News