ಬಲಪಂಥೀಯರಿಂದ ಹೊಸ ಶಾಸಕರಿಗೆ ‘ಸ್ಫೂರ್ತಿಧಾಯಕ’ ಭಾಷಣ: ಸಿಪಿಎಂ ಆಕ್ಷೇಪ

Update: 2023-06-22 16:53 GMT

ಬೆಂಗಳೂರು, ಜೂ. 22: ನೂತನವಾಗಿ ಆಯ್ಕೆಯಾಗಿರುವ ಹೊಸ ಶಾಸಕರಿಗೆ ತರಬೇತಿ ಶಿಬಿರದಲ್ಲಿ ವಿವಾದಾತ್ಮಕ ಬಲಪಂಥೀಯರಿಂದ ‘ಸ್ಫೂರ್ತಿದಾಯಕ’ ಭಾಷಣ ಮಾಡಿಸುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರ ನಿರ್ಧಾರಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್‍ವಾದಿ(ಸಿಪಿಎಂ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಪಕ್ಷ ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ಮೊದಲ ಬಾರಿ ವಿಧಾನಸಭೆಗೆ ಪ್ರವೇಶಿಸಿದ ಶಾಸಕರಿಗೆ ತರಬೇತಿ ಕಾರ್ಯಕ್ರಮ ಅಗತ್ಯವೆ ಆಗಿದೆ. ಆದರೆ,  ತರಬೇತಿ ನೀಡುವ ಸಂದರ್ಭದಲ್ಲಿ ರವಿಶಂಕರ್ ಗುರೂಜಿ, ವೀರೇಂದ್ರ ಹೆಗಡೆ, ಗುರುರಾಜ್ ಕರ್ಜಗಿ, ಬ್ರಹ್ಮಕುಮಾರಿ ಆಶಾದೀದಿ, ಮೊಹಮದ್ ಕುಂಞ ಮುಂತಾದ ವಿವಾದಾತ್ಮಕ ವ್ಯಕ್ತಿಗಳಿಂದ ಭಾಷಣ ಮಾಡಿಸಲು ಕ್ರಮ ವಹಿಸಿದ ತಮ್ಮ ನಡಾವಳಿ ಆಶ್ಚರ್ಯಕರ, ಇದು ಅನಗತ್ಯವಾಗಿತ್ತು. ಸಾರ್ವಜನಿಕರ ನಡುವೆ ಇದು ತಪ್ಪು ಸಂದೇಶ ರವಾನಿಸಿದೆ’ ಎಂದು ಹೇಳಿದ್ದಾರೆ.

‘ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸುವುದೇ ಜಾತ್ಯತೀತತೆ ಅಥವಾ ಧರ್ಮ ನಿರಪೇಕ್ಷತೆಯೆಂದು  ದೇಶದ ಜಾತ್ಯತೀತ ಸ್ವರೂಪದ ಕುರಿತಂತೆ ಸಂವಿಧಾನ ಹೇಳುತ್ತಿರುವಾಗ, ವಿವಾದಾತ್ಮಕ ವ್ಯಕ್ತಿಗಳನ್ನು ಹೊಸ ಶಾಸಕರ ತರಬೇತಿಯಲ್ಲಿ ಭಾಗಿಯಾಗಲು ಕರೆದಿರುವುದು ದೇಶದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯೆಂದು ಸಿಪಿಎಂ ಭಾವಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

‘ಇವರು ಮಾಡುವ ಸ್ಫೂರ್ತಿಧಾಯಕ ಭಾಷಣ ಜಾತ್ಯತೀತ ಸ್ವರೂಪಕ್ಕೆ ಪೂರಕವಾಗಿರುತ್ತದೆಯೇ? ಈ ಕುರಿತು ರಾಜ್ಯದ ಜನತೆಗೆ ಖಾದರ್ ಅವರು ಸ್ಪಷ್ಠೀಕರಣ ನೀಡಬೇಕು. ಶಾಸಕರು, ಸಂವಿಧಾನ ಮತ್ತು ಅದರ ಆಶಯವಾದ ದೇಶದ ಒಕ್ಕೂಟ ಹಾಗೂ ಜಾತ್ಯತೀತ ಸ್ವರೂಪವನ್ನು ಅರ್ಥೈಸಿಕೊಳ್ಳಲು ಇವರ ಭಾಗವಹಿಸುವಿಕೆ ಯಾವ ರೀತಿಯಲ್ಲಿ ನೆರವಾಗುತ್ತದೆ. ಅನಗತ್ಯ ವಿವಾದಾತ್ಮಕ ವ್ಯಕ್ತಿಗಳ ಭಾಗವಹಿಸುವಿಕೆಯನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Similar News