ಇಂದಿರಾ ಕ್ಯಾಂಟೀನ್‍ಗಳಲ್ಲಿ ಹಾಲು, ಮೊಸರು ಸೇರಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ: ಭೀಮಾ ನಾಯ್ಕ್
ಬೆಂಗಳೂರು, ಜೂ. 22: ‘ಬೆಂಗಳೂರು ನಗರದಲ್ಲಿನ ಇಂದಿರಾ ಕ್ಯಾಂಟೀನ್‍ನಲ್ಲಿ ಗುಣಮಟ್ಟದ ಆಹಾರದೊಂದಿಗೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಇದರಿಂದ ಉದ್ಯಮ ಮತ್ತಷ್ಟು ವಿಸ್ತರಿಸಲು ಅನುಕೂಲವಾಗಲಿದೆ ಎಂದು ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಇಂದಿರಾ ಕ್ಯಾಂಟೀನ್‍ಗಳಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆ ಕುರಿತು ಶೀಘ್ರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಚಾಕೋಲೇಟ್, ಬಿಸ್ಕತ್, ಐಸ್ ಕ್ರೀಂ, ಹಾಲು, ಮೊಸರು ಸೇರಿದಂತೆ ನಂದಿನ ಉತ್ಪನಗಳು ಕ್ಯಾಂಟೀನ್‍ನಲ್ಲಿ ಲಭ್ಯವಾಗಲಿದೆ. ಈ ಮೂಲಕ ಕೆಎಂಎಫ್ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವುದಕ್ಕೆ ಮುಂದಾಗಲಾಗುತ್ತಿದೆ’ ಎಂದು ಹೇಳಿದರು.
ಬಿಬಿಎಂಪಿ ಹಾಗೂ ರಾಜ್ಯ ಸರಕಾರ ಇಂದಿರಾ ಕ್ಯಾಂಟೀನ್‍ಗೆ ಜನರನ್ನು ಆಕರ್ಷಿಸಲು ಹೊಸ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಜನರಿಗೆ ತಮ್ಮ ಸಮೀಪದಲ್ಲಿ ನಂದಿನಿ ಉತ್ಪನ್ನಗಳು ಸಿಗಲಿವೆ. ಮಾತ್ರವಲ್ಲ, ಕೆಎಂಎಫ್‍ಗೆ ಮಾರುಕಟ್ಟೆ ವಿಸ್ತರಿಸಲು ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಸಂಸ್ಥೆ ತನ್ನ ಪ್ರಯತ್ನ ಮುಂದುವರಿಸಲಿದೆ ಎಂದು ಭೀಮಾ ನಾಯ್ಕ್ ಹೇಳಿದರು.