ತ್ರಿಭಾಷಾ ಸೂತ್ರ, ಕ್ಷೇತ್ರ ಮರುವಿಂಗಡಣೆ ವಿರುದ್ಧ ಎ.16ರಿಂದ ಪ್ರವಾಸ : ಸಿ.ಎಂ.ಇಬ್ರಾಹೀಂ

ಬೆಂಗಳೂರು : ತ್ರಿಭಾಷಾ ಸೂತ್ರ ಮತ್ತು ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯನ್ನು ವಿರೋಧಿಸಿ ಎ.16ರಿಂದ ಪ್ರವಾಸ ಮಾಡಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ತಿಳಿಸಿದ್ದಾರೆ.
ಬುಧವಾರ ನಗರದ ಸೈಟ್ಸ್-ಗೈಡ್ಸ್ ಸಭಾಂಗಣದಲ್ಲಿ ನವ ಕರ್ನಾಟಕ ನಿರ್ಮಾಣ ಆಂದೋಲನದ ನೇತೃತ್ವದಲ್ಲಿ ತ್ರಿಭಾಷಾ ಸೂತ್ರ ಮತ್ತು ಕ್ಷೇತ್ರಗಳ ಮರುವಿಂಗಡಣೆಯನ್ನು ವಿರೋಧಿಸಿ, ಸ್ವಾಭಿಮಾನಿ ಚಳವಳಿಗಳ ಒಂದು ಸಂವಾದದಲ್ಲಿ ಮಾತನಾಡಿದ ಅವರು, ಈ ಸಂಬಂಧ ದಕ್ಷಿಣ ಭಾರತದ ಎಲ್ಲ ನಾಯಕರು ಸೇರಿ ಒಂದು ಸಭೆ ಮಾಡಬೇಕು. ಕರ್ನಾಟಕದಲ್ಲಿ ಪರ್ಯಾಯವಾದ 3ನೇ ರಾಜಕೀಯ ಶಕ್ತಿಯನ್ನು ನಿರ್ಮಾಣ ಮಾಡಬೇಕು. ನಾನು ಅದಕ್ಕೆ ಸಹಕಾರ ನೀಡುತ್ತೇನೆ. ನಾವೆಲ್ಲರೂ ಒಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಉತ್ತರದ ರಾಜ್ಯಗಳು 2 ಭಾಷೆಯನ್ನು ಕಲಿಯುತ್ತಿವೆ. ನಾವೇಕೆ ತ್ರಿಭಾಷಾ ಸೂತ್ರದಲ್ಲಿ ಹಿಂದಿ ಕಲಿಯಬೇಕು. ಈಗಾಗಲೇ ರಾಜ್ಯದಲ್ಲಿ ಹಿಂದಿ ಹೇರಿಕೆ ಆರಂಭವಾಗಿದೆ. ಇದನ್ನು ತಡೆಯಲು ನಿರಂತರ ಹೋರಾಟ ಮಾಡಬೇಕು ಎಂದರು.
ಸಂವಾದದಲ್ಲಿ ಆಲ್ ಇಂಡಿಯಾ ಬಹುಜನ ಪಕ್ಷದ ರಾಷ್ಟ್ರೀಯ ಸಂಯೋಜಕ ಗೋಪಿನಾಥ್, ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕ ಆರ್. ಮುನಿಯಪ್ಪ, ಆರ್‌ಪಿಐ(ಬಿ) ರಾಷ್ಟ್ರೀಯ ಅಧ್ಯಕ್ಷ ಎನ್. ಮೂರ್ತಿ, ಆರ್ ಪಿಐ(ಕರ್ನಾಟಕ ರಾಜ್ಯಾಧ್ಯಕ್ಷ ಆರ್. ಮೋಹನ್ ರಾಜ್, ಜಯ ಕರ್ನಾಟಕದ ಮುಖಂಡ ರಾಧಾಕೃಷ್ಣ, ಬೈಲ ಹೊನ್ನಯ್ಯ, ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮೀಪತಿ ಮತ್ತಿತರರು ಹಾಜರಿದ್ದರು.