ಸೈಬರ್ ಅಪರಾಧಗಳ ತಡೆಗೆ ಸಹಾಯವಾಣಿ-1930, ವೆಬ್‍ಬಾಟ್ ಉನ್ನತೀಕರಣ: ಅಲೋಕ್ ಮೋಹನ್

Update: 2025-04-22 23:07 IST
ಸೈಬರ್ ಅಪರಾಧಗಳ ತಡೆಗೆ ಸಹಾಯವಾಣಿ-1930, ವೆಬ್‍ಬಾಟ್ ಉನ್ನತೀಕರಣ: ಅಲೋಕ್ ಮೋಹನ್

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಆನ್‍ಲೈನ್ ಹಣಕಾಸು ವಂಚನೆಗಳನ್ನು ತಡೆಯಲು ರಾಜ್ಯದಲ್ಲಿ ಸೈಬರ್ ಅಪರಾಧ ಸಹಾಯವಾಣಿ-1930 ಜೊತೆಗೆ ‘ವೆಬ್‍ಬಾಟ್’ ಉನ್ನತೀಕರಣ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.

ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಎಡಿಜಿಪಿ ಸಿಎಲ್-ಎಂ ಕಾರ್ನರ್ ಹೌಸ್ ಕಚೇರಿಯಲ್ಲಿ ಉನ್ನತೀಕರಿಸಲಾದ ಸೈಬರ್ ಅಪರಾಧ ಸಹಾಯವಾಣಿ-1930 ವೆಬ್ ಬಾಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ 1930 ಸಹಾಯವಾಣಿಯಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆ 2022ರಲ್ಲಿ 1.30 ಲಕ್ಷ ಇದ್ದು, ನಂತರ 2024ರಲ್ಲಿ 8.26ಲಕ್ಷಕ್ಕೆ ಮತ್ತು 2025ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) 4.34 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ತುರ್ತು ಸ್ಪಂದನಾ ವ್ಯವಸ್ಥೆಯ ಸಾರ್ವಜನಿಕ ಸುರಕ್ಷತಾ ಪ್ರತ್ಯುತ್ತರ ಕೇಂದ್ರವನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಂಪರ್ಕ, ಸಾರಿಗೆ ಮತ್ತು ಆಧುನೀಕರಣರವರ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿದ್ದು, ಸದರಿ 1930 ಸಹಾಯವಾಣಿ ಕೇಂದ್ರದಲ್ಲಿ ಆನ್‍ಲೈನ್ ಹಣಕಾಸು ವಂಚನೆ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟ್‍ಲ್ (ಎನ್‍ಸಿಆರ್‍ಪಿ) ಮೂಲಕ ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಹಾಯವಾಣಿಯ ಸಿಬ್ಬಂದಿಯ ಮೂಲಕ ಸದರಿ ಮಾಹಿತಿಯನ್ನು ಎನ್.ಸಿ.ಆರ್.ಪಿಯಲ್ಲಿ ದಾಖಲಿಸಲಾಗುವುದು. ಇದು ಸಾರ್ವಜನಿಕರಿಗೆ 1930 ಸಹಾಯವಾಣಿಯಲ್ಲಿ ದೂರು ಸಲ್ಲಿಸಲು ಹಾಗೂ ಕಾಲ್ ಡ್ರಾಪ್‍ಗಳನ್ನು ಸಹ ತಡೆಯಲು ಸಹಾಯವಾಗುತ್ತದೆ.

1930 ಸಹಾಯವಾಣಿಯ ಎಲ್ಲಾ ಸಿಬ್ಬಂದಿಗಳು ಕಾರ್ಯನಿರತವಾಗಿದ್ದ ಸಮಯದಲ್ಲಿ ದೂರುದಾರರು ಸ್ವಯಿಚ್ಚೆಯಿಂದ ಕರೆ ಕಡಿತಗೊಳಿಸಿದ ಸಮಯದಲ್ಲೂ ಸಹ ಎಸ್‍ಎಂಎಸ್ ಮುಖಾಂತರ ಈ ವೆಬ್‍ಬಾಟ್ ಲಿಂಕ್ ಅನ್ನು ಸದರಿ ದೂರುದಾರರಿಗೆ ಕಳುಹಿಸಲಾಗುವುದು ಎಂದು ಹೇಳಿದರು.

2022ರಲ್ಲಿ 20,894 ದೂರುಗಳನ್ನು ಸೈಬರ್ ಕ್ರೈಂ ಸಹಾಯವಾಣಿ-1930 ಮೂಲಕ ಎನ್‍ಸಿಆರ್‌ಪಿನಲ್ಲಿ ದಾಖಲಿಸಲಾಗಿದ್ದು, 2024ರಲ್ಲಿ 97,929 ದೂರುಗಳನ್ನು ದಾಖಲಿಸಲಾಗಿತ್ತು. 2022ನೇ ಇಸವಿಯಲ್ಲಿ ವರದಿಯಾದ ಒಟ್ಟು ವಂಚನೆಯ ಮೊತ್ತವು ರೂ.113 ಕೋಟಿ ರೂಪಾಯಿಗಳಾಗಿದ್ದು, ನಂತರ 2024ರಲ್ಲಿ 2,396 ಕೋಟಿ ರೂ.ಗಳಿಗೆ ಏರಿಕೆಯಾಗಿರುತ್ತದೆ. ಈ ಸಂಬಂಧ ಸೈಬರ್ ಕ್ರೈಂ ಸಹಾಯವಾಣಿ-1930ರ ಮೂಲಕ ಬ್ಯಾಂಕ್‍ಗಳಲ್ಲಿ ತಡೆಹಿಡಿಯಲಾದ ಮೊತ್ತವು 2022ರಲ್ಲಿ 8 ಕೋಟಿ ರೂ.ಗಳಾಗಿದ್ದು, ನಂತರ 2024 ರಲ್ಲಿ 226 ಕೋಟಿ ರೂ. ವಂಚನೆಯ ಹಣವನ್ನು ತಡೆಹಿಡಿಯಲಾಗಿದೆ. ಸದರಿ ಮೊತ್ತವು ವಂಚನೆಯ ಮೊತ್ತದ ಶೇ.9ರಷ್ಟು ಆಗಿರುತ್ತದೆ ಎಂದು ತಿಳಿಸಿದರು.

ಈ ಹೊಸ ವ್ಯವಸ್ಥೆಯ ಪರಿಣಾಮದಿಂದಾಗಿ 2025ರ ಮೊದಲ ತ್ರೈಮಾಸಿಕದಲ್ಲಿ 38,000 ಪ್ರಕರಣಗಳನ್ನು ಸೈಬರ್ ಕ್ರೈಂ ಸಹಾಯವಾಣಿ-1930 ಮೂಲಕ ದಾಖಲಿಸಲಾಗಿರುತ್ತದೆ. ಪ್ರಸ್ತುತ ವರ್ಷದಲ್ಲಿ ಮಾರ್ಚ್ 2025ರ ಅಂತ್ಯಕ್ಕೆ ವಂಚನೆ ಹಣದ ಶೇ.16ರಷ್ಟು ಮೊತ್ತವನ್ನು ಬ್ಯಾಂಕ್‍ಗಳಲ್ಲಿಯೇ ತಡೆಯುವಲ್ಲಿ ಶ್ರಮವಹಿಸಿರುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ, ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ, ಹೆಚ್ಚುವರಿ ಮಹಾ ನಿರ್ದೇಶಕ ನಂಜುಂಡಸ್ವಾಮಿ, ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು


ವೆಬ್‍ಬಾಟ್ ಮತ್ತು ಸೌಲಭ್ಯಗಳ ವಿವರ

•1930 ಸಹಾಯವಾಣಿಯಲ್ಲಿ ಈ ಹಿಂದಿನ ದೂರವಾಣಿ ಮೂಲಸೌಕರ್ಯವನ್ನು ಬದಲಾಯಿಸಿ ಎಸ್‍ಐಪಿ ಆನ್‍ಲೈನ್‍ಗಳಿಗೆ ಉನ್ನತೀಕರಿಸಲಾಗಿದೆ. ಇದು ಹೆಚ್ಚುತ್ತಿರುವ ದೂರು ಕರೆಗಳ ಪ್ರಮಾಣವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

•ಭಾಷಾ ಆಯ್ಕೆ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಈ ವ್ಯವಸ್ಥೆಯು ವಂಚನೆಗೊಳಗಾದ ದೂರುದಾರರ ಸಂವಹನಕ್ಕಾಗಿ ಕನ್ನಡ, ಇಂಗ್ಲೀಷ್ ಅಥವಾ ಹಿಂದಿ ಭಾಷೆಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.

•ವಂಚನೆಗೊಳಗಾದ ದೂರುದಾರರು 1930 ಸಹಾಯವಾಣಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸುವ ಎಲ್ಲಾ ಸಿಬ್ಬಂದಿಗಳು ಕಾರ್ಯನಿರತರಾಗಿದ್ದರೆ, ಈ ಸಮಯದಲ್ಲಿ ಐವಿಆರ್ ಮೂಲಕ ದೂರುದಾರರ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.

•ವಂಚನೆಗೊಳಗಾದವರು ಮತ್ತು ವಂಚಕರ ಬಗೆಗಿನ ಮಾಹಿತಿಯನ್ನು ಸಹ ಸಂಗ್ರಹಿಸಿ, ಶೇಖರಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಮಾಹಿತಿಯಿಂದ ತನಿಖಾಧಿಕಾರಿಗಳು ಆರೋಪಿಯ ಬಗ್ಗೆ ಹಾಗೂ ವಂಚನೆಗಳ ಬಗ್ಗೆ ವಿಶ್ಲೇಷಿತ ಮಾಹಿತಿಯನ್ನು ಪಡೆಯಬಹುದಾಗಿದೆ.

•ಸೈಬರ್ ಕ್ರೈಂ ಸಹಾಯವಾಣಿ-1930ವನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಸ್.ಮುರುಗನ್ ಅವರ ಮಾರ್ಗದರ್ಶನದಲ್ಲಿ ಸುಧಾರಿತ ಸಾಫ್ಟ್‌ ವೇರ್ ಹಾಗೂ ಮೂಲ ಸೌಕರ್ಯದೊಂದಿಗೆ ಅಂದಾಜು ವೆಚ್ಚ 1 ಕೋಟಿ ರೂ.ಗಳಲ್ಲಿ ಉನ್ನತೀಕರಿಸಲಾಗಿದೆ.

• ಇದರಿಂದ ಹಣಕಾಸು ವಂಚನೆಗೊಳಗಾದ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವುದಾಗಿದೆ.


Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News