‘ಹಜ್ ಯಾತ್ರೆ-2025’ ಯಾತ್ರಾರ್ಥಿಗಳಿಗೆ ಲಸಿಕೆ ಕಾರ್ಯಕ್ರಮಕ್ಕೆ ರಹೀಂ ಖಾನ್ ಚಾಲನೆ

Update: 2025-04-22 22:51 IST
‘ಹಜ್ ಯಾತ್ರೆ-2025’ ಯಾತ್ರಾರ್ಥಿಗಳಿಗೆ ಲಸಿಕೆ ಕಾರ್ಯಕ್ರಮಕ್ಕೆ ರಹೀಂ ಖಾನ್ ಚಾಲನೆ

PC: PTI

  • whatsapp icon

ಬೆಂಗಳೂರು : ರಾಜ್ಯ ಹಜ್ ಸಮಿತಿಯ ಮೂಲಕ ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ನಗರದ ಹಜ್ ಭವನದಲ್ಲಿ ಆಯೋಜಿಸಿರುವ ಮೂರು ದಿನಗಳ ಲಸಿಕೆ ಕಾರ್ಯಕ್ರಮಕ್ಕೆ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಮಂಗಳವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಹೀಂ ಖಾನ್, ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಜೊತೆಗೆ, ಹಜ್ ಯಾತ್ರೆ ಹಾಗೂ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾದಲ್ಲಿ ಕಲ್ಪಿಸಲಾಗುವ ಸೌಲಭ್ಯಗಳ ಕುರಿತು ಹಜ್ ಸಮಿತಿ ಸದಸ್ಯರ ಜೊತೆ ನಡೆಸಿದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ಯಾತ್ರಾರ್ಥಿಗಳಿಗೆ ನೀಡಲಾಗಿದ್ದ ಹೊಟೇಲ್ ಕೊಠಡಿಗಳು ಸೇರಿದಂತೆ ಇನ್ನಿತರ ಸೌಲಭ್ಯಗಳು ಸಮರ್ಪಕವಾಗಿರಲಿಲ್ಲ ಎಂದು ಕೆಲವು ದೂರುಗಳು ಕೇಳಿ ಬಂದಿದ್ದವು. ಲಕ್ಷಾಂತರ ಜನ ಹೋಗುವ ಯಾತ್ರೆಯ ಸ್ಥಳದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆಗುತ್ತವೆ. ಆದರೆ, ಈ ಬಾರಿ ಅಂತಹ ಯಾವುದೆ ಸಮಸ್ಯೆಗಳು ಆಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ರಹೀಂ ಖಾನ್ ತಿಳಿಸಿದರು.

ಮಂಗಳೂರು ಹಾಗೂ ಗುಲ್ಬರ್ಗದಲ್ಲಿ ಹಜ್ ಭವನ ನಿರ್ಮಾಣ ಮಾಡುವ ವಿಚಾರವಾಗಿಯೂ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲಾಗುವುದು. ಗುಲ್ಬರ್ಗದಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ 30 ಕೋಟಿ ರೂ. ಒದಗಿಸುವಂತೆ ಶಾಸಕಿ ಕನೀಝ್ ಫಾತಿಮಾ ಬೇಡಿಕೆ ಸಲ್ಲಿಸಿದ್ದಾರೆ. ಈಗಾಗಲೆ ಸರಕಾರದ 10 ಕೋಟಿ ರೂ. ಅನುದಾನ ಲಭ್ಯವಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಹಜ್ ಭವನದ ಪಕ್ಕದಲ್ಲೆ ಮತ್ತೊಂದು ಬಹುಪಯೋಗಿ ಕಟ್ಟಡ ನಿರ್ಮಾಣ ಮಾಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಹಜ್ ಭವನ ಕೇವಲ ಹಜ್ ಸಂದರ್ಭದಲ್ಲಿ ಮಾತ್ರ ಬಳಕೆಯಾಗಬಾರದು. ವರ್ಷದ 365 ದಿನಗಳು ಇಲ್ಲಿ ಚಟುವಟಿಕೆಗಳು ನಡೆಯುತ್ತಿರಬೇಕು ಎಂದು ರಹೀಂ ಖಾನ್ ತಿಳಿಸಿದರು.

ಈ ಬಾರಿ ರಾಜ್ಯದಿಂದ 8600 ಮಂದಿ ಯಾತ್ರಾರ್ಥಿಗಳು ಹಜ್ ಸಮಿತಿಯ ಮೂಲಕ ತೆರಳಲಿದ್ದಾರೆ. ಒಟ್ಟು 27 ವಿಮಾನಗಳ ಮೂಲಕ ಯಾತ್ರಾರ್ಥಿಗಳು ಪವಿತ್ರ ಮದೀನಾ ನಗರಕ್ಕೆ ತೆರಳಲಿದ್ದಾರೆ. ರಾಜ್ಯದ ಯಾತ್ರಾರ್ಥಿಗಳನ್ನು ಒಳಗೊಂಡ ಮೊದಲ ವಿಮಾನವು ಎ.29ರಂದು ತೆರಳಲಿದೆ. ಈ ಹಿನ್ನೆಲೆಯಲ್ಲಿ ಎ.28ರಂದು ಸಂಜೆ 7 ಗಂಟೆಗೆ ವಿಮಾನಯಾನ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಖಾರ್ ಅಹ್ಮದ್ ಖಾನ್(ಟಿಪ್ಪು) ಮಾತನಾಡಿ, ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ನಡೆಸಿದ್ದೇವೆ. ಸೌದಿ ಅರೇಬಿಯಾ ಸರಕಾರದ ನಿರ್ದೇಶನಗಳು, ಕಟ್ಟುಪಾಡುಗಳ ಬಗ್ಗೆ ತರಬೇತಿ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ತಿಳಿಸಿದ್ದೇವೆ. ಅಲ್ಲದೇ, ಸೌದಿ ಅರೇಬಿಯಾ ಸರಕಾರದ ನುಸುಕ್ ಆ್ಯಪ್ ಬಳಕೆಯ ಬಗ್ಗೆಯೂ ತರಬೇತಿ ನೀಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ವಿಧಾನಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಸೇರಿದಂತೆ ರಾಜ್ಯ ಹಜ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News