ಕೇಶವ ಮಳಗಿ ಅವರ ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್ ಗದ್ಯಗಾರುಡಿ ಕೃತಿ ಸೇರಿ 3 ಕೃತಿಗೆ ‘ಪುಸ್ತಕ ಸೊಗಸು ಬಹುಮಾನ’
ಬೆಂಗಳೂರು: ಕೇಶವ ಮಳಗಿ ಅವರ ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸ್ ಗದ್ಯಗಾರುಡಿ ಕೃತಿಗೆ 2022, ಡಾ.ಆರ್. ಎಚ್.ಕುಲಕರ್ಣಿ ಮತ್ತು ಎಚ್.ಎ.ಅನಿಲ್ ಕುಮಾರ್ ಅವರ ದೃಶ್ಯಕಲಾ ಕಮಲಾ ಕೃತಿಗೆ 2023 ಹಾಗೂ ಪ್ರೊ.ಕೆ.ಸಿ.ಶಿವಾರೆಡ್ಡಿ ಅವರ ಕೆ.ಪಿ.ಪೂರ್ಣಚಂದ್ರತೇಜಸ್ವಿ ಸಮಗ್ರ ಕೃತಿ ಜಗತ್ತು ಸಂಪುಟಗಳು 2024ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ ಪಡೆದುಕೊಂಡಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, 2022ನೇ ಸಾಲಿನ ಪುಸ್ತಕ ಸೊಗಸು 2ನೇ ಬಹುಮಾನಕ್ಕೆ ಜಿ.ಕೆ.ದೇವರಾಜಸ್ವಾಮಿ ಅವರ ಅಧಿಷ್ಠಾನ ಬಾಯಿಪಾಠ ಪಸ್ತಕ, 3ನೇ ಬಹುಮಾನಕ್ಕೆ ಡಾ.ರವಿಕುಮಾರ್ ನೀಹ ಅವರ ಅರಸು ಕುರನ್ಗರಾಯ, 2022ನೇ ಸಾಲಿನ ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಡಾ.ಕುರುವ ಬಸವರಾಜ್ ಅವರ ಮಲ್ಲಿಗೆ, ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಎಚ್.ಎಚ್.ಮ್ಯಾದಾರ್ ಅವರ ಅಮೂಲ್ಯ ಮುತ್ತು ರಾಜಕುಮಾರ್ ಕುರಿತ ನೂರಾರು ಚುಕ್ಕಿ ಚಿತ್ರ ಸಂಪುಟ, ಮುಖಪುಟ ಚಿತ್ರ ಕಲೆಯ ಬಹುಮಾನಕ್ಕೆ ಪಾರ್ವತಿ ಜಿ.ಐತಾಳ್ ಅವರ ಮಾಧವಿ ಕಥನ –ಕಥನ ಕಾವ್ಯ, ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಬೇಲೂರು ರಘುನಂದನ ಅವರ ಚಿಟ್ಟೆ ಏಕವ್ಯಕ್ತಿ ನಾಟಕ ಆಯ್ಕೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
2023ನೇ ಸಾಲಿನ ಪುಸ್ತಕ ಸೊಗಸು 2ನೇ ಬಹುಮಾನಕ್ಕೆ ಮಲ್ಲಿಕಾರ್ಜುನ ಕಲಮರಹಳ್ಳಿ ಅವರ ಕಾಡುಗೊಲ್ಲ ಬುಡಕಟ್ಟು ಕುಲಕಥನ, 3ನೇ ಬಹುಮಾನಕ್ಕೆ ಡಾ.ಮಲ್ಲಿಕಾರ್ಜುನ ಸಿ.ಬಾಗೋಡಿ ಅವರ ಚಿತ್ರಭಿತ್ತಿ, ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಪರವೀನ ಬಾನು ಎಂ.ಶೇಖ ಅವರ ಬಾಲ ಮಂದಾರ, ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಬ್ಯೂಟಿ ಬೆಳ್ಳಕ್ಕಿ- ಮಕ್ಕಳ ಕಥನ, ಮುಖಪುಟ ಚಿತ್ರ ಕಲೆಯ ಬಹುಮಾನಕ್ಕೆ ಬಿಡಾರ ಅತ್ಮಕಥೆ, ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಡಾ.ಎಸ್.ಗುರುಮೂರ್ತಿ ಅವರ ಕಂಬದಹಳ್ಳಿ ಕಂಬಾಪುರಿಯ ಪಂಚಕೂಟ ಬಸದಿ ಕೃತಿ ಅಯ್ಕೆಯಾಗಿವೆ ಎಂದು ತಿಳಿಸಿದ್ದಾರೆ.
2024ನೇ ಸಾಲಿನ ಪುಸ್ತಕ ಸೊಗಸು 2ನೇ ಬಹುಮಾನಕ್ಕೆ ಕೆ.ಸಿ.ಶ್ರೀನಾಥ್ ಅವರ ಶಕ್ತಿನದಿ ಶರಾವತಿ, 3ನೇ ಬಹುಮಾನಕ್ಕೆ ಸ್ವಾಮಿ ಪೊನ್ನಾಚಿ ಅವರ ಕಾಡು ಹುಡುಗನ ಹಾಡುಪಾಡು, ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಚಂದ್ರೇಗೌಡ ಕುಲಕರ್ಣಿ ಅವರ ಕನ್ನಡ ನುಡಿ ಚಂದ ಚಿಲಿಪಿಲಿ ಶ್ರೀಗಂಧ, ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಮಾತಿಗಿಳಿದ ಚಿತ್ರ, ಮುಖಪುಟ ಚಿತ್ರಕಲೆ ಬಹುಮಾನಕ್ಕೆ ಬಣಮಿ, ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಮತ್ತೆ ಮತ್ತೆ ಶಂಕರಗೌಡ ತಲೆಮಾರಿನಂತರದ ಮನಸುಗಳ ಇಣುಕು ನೋಟ ಕೃತಿಗಳು ಅಯ್ಕೆಯಾಗಿವೆ ಎಂದು ತಿಳಿಸಿದ್ದಾರೆ.
ಪುಸ್ತಕ ಸೊಗಸು ಮೊದಲನೇ ಬಹುಮಾನಕ್ಕೆ 25 ಸಾವಿರ ರೂ., 2ನೇ ಬಹುಮಾನಕ್ಕೆ 20 ಸಾವಿರ ರೂ., 3ನೇ ಬಹುಮಾನಕ್ಕೆ 10 ಸಾವಿರ ರೂ., ಮಕ್ಕಳ ಪುಸ್ತಕ ಸೊಗಸುಗೆ 8 ಸಾವಿರ ರೂ., ಮುಖಪುಟ ಚಿತ್ರ ವಿನ್ಯಾಸ ಬಹುಮಾನ 10 ಸಾವಿರ ರೂ., ಮುಖಪುಟ ಚಿತ್ರಕಲೆಯ ವಿನ್ಯಾಸ ಬಹುಮಾನಕ್ಕೆ 8 ಸಾವಿರ ರೂ., ಪುಸ್ತಕ ಮುದ್ರಣ ಸೊಗಸು ಬಹುಮಾನವು 5 ಸಾವಿರ ರೂ. ನಗದು ಬಹುಮಾನ ಹೊಂದಿದೆ ಎಂದು ತಿಳಿಸಿದ್ದಾರೆ.