‘ಇನ್ವೆಸ್ಟ್ ಕರ್ನಾಟಕ’ ರೋಡ್ ಶೋ ಅಂಗವಾಗಿ ಲಂಡನ್‍ನಲ್ಲಿ ಸಚಿವರ ಸರಣಿ ಸಭೆ
ಲಂಡನ್ : ಯೂನಿವರ್ಸಿಟಿ ಆಫ್ ಲಿವರ್‍ಪೂಲ್, ಯುನಿವರ್ಸಿಟಿ ಆಫ್ ಈಸ್ಟ್ ಲಂಡನ್, ಯಾರ್ಕ್ ಯೂನಿವರ್ಸಿಟಿ ಮತ್ತು ವಾಲ್ವರ್‍ಹ್ಯಾಂಪ್ಟನ್ ವಿಶ್ವ ವಿದ್ಯಾನಿಲಯಗಳಂತಹ ಸಂಸ್ಥೆಗಳ ಪ್ರತಿನಿಧಿಗಳು ರಾಜ್ಯ ಸರಕಾರದ ‘ಕ್ವಿನ್ ಸಿಟಿ’ ಯೋಜನೆಯಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದಾರೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ’ದ ಪೂರ್ವಭಾವಿ ಸಿದ್ಧತೆಗಳ ಅಂಗವಾಗಿ ಲಂಡನ್‍ನಲ್ಲಿ ಇಂಗ್ಲೆಂಡ್‍ನ ಉದ್ಯಮಿಗಳು ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಸರಣಿ ಸಭೆ ನಡೆಸಿದರು.
ಜಾಗತಿಕ ಶಿಕ್ಷಣ ಕೇಂದ್ರವಾಗಿ ಕರ್ನಾಟಕವು ಅಭಿವೃದ್ಧಿ ಹೊಂದುತ್ತಿರುವುದನ್ನು ಈ ಸಮಾಲೋಚನೆಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಅಸ್ತಿತ್ವಕ್ಕೆ ಬರುತ್ತಿರುವ ಮಹತ್ವಾಕಾಂಕ್ಷಿ ‘ಕ್ವಿನ್ ಸಿಟಿ’ಯ ವ್ಯಾಪ್ತಿಯೂ ಸೇರಿದಂತೆ ರಾಜ್ಯಾದ್ಯಂತ ಇಂಗ್ಲೆಂಡ್ ಮೂಲದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್ ಆರಂಭಿಸಲು ವಿಫುಲ ಅವಕಾಶಗಳು ಇರುವುದನ್ನು ಅವರು ಮನದಟ್ಟು ಮಾಡಿಕೊಟ್ಟರು.
ಕರ್ನಾಟಕದ ಉದ್ದಿಮೆ ಸ್ನೇಹಿ ಪರಿಸರ, ವಿಶ್ವದರ್ಜೆಯ ಮೂಲಸೌಲಭ್ಯ ಮತ್ತು ಹೂಡಿಕೆದಾರ-ಸ್ನೇಹಿ ನೀತಿಗಳನ್ನು ಪ್ರಮುಖವಾಗಿ ಬಿಂಬಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸಲಿರುವ ಇನ್ವೆಸ್ಟ್ ಕರ್ನಾಟಕದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರು. ಆರ್ಥಿಕ ಸಹಕಾರ ವೃದ್ಧಿಸಲು ಮತ್ತು ರಾಜ್ಯದಲ್ಲಿ ವಹಿವಾಟು ವಿಸ್ತರಿಸಲು ಜಾಗತಿಕ ಹೂಡಿಕೆದಾರರ ಸಮಾವೇಶ ನೆರವಾಗಲಿದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.
ಇಂಗ್ಲೆಂಡ್‍ನ ಸಣ್ಣ ಉದ್ದಿಮೆ ಹಾಗೂ ರಫ್ತು ಸಚಿವ ಗರೆಥ್ ಥಾಮಸ್, ಬ್ರಿಟನ್ನಿನ ಡೆಪ್ಯುಟಿ ಹೈಕಮಿಷನರ್ ಹಾಗೂ ಇಂಗ್ಲೆಂಡ್ ಭಾರತ ವಹಿವಾಟು ಮಂಡಳಿಯ(ಯುಕೆಐಬಿಸಿ)ಪ್ರತಿನಿಧಿಗಳಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಫುಲ ಅವಕಾಶಗಳನ್ನು ಸಚಿವ ಪಾಟೀಲ್ ಅವರು ವಿವರಿಸಿದ್ದಾರೆ.
ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಎಂಬಿಡಿಎ, ಸಲಹಾ ಸಂಸ್ಥೆ ಸ್ಕ್ರಮ್ ಕನೆಕ್ಟ್ ಹಾಗೂ ರಸೆಲ್ ಗ್ರೂಪ್ ಆಫ್ ಯುಕೆ ಯುನಿವರ್ಸಿಟೀಸ್‍ನ ಪ್ರತಿನಿಧಿಗಳು ಸೇರಿದಂತೆ ಬ್ರಿಟನ್ನಿನ ಪ್ರಮುಖ ಕೈಗಾರಿಕೋದ್ಯಮಿಗಳ ಜೊತೆ ಪ್ರತ್ಯೇಕವಾಗಿ ದುಂಡು ಮೇಜಿನ ಸಭೆಗಳನ್ನು ನಡೆಸಿತು. ಉದ್ಯಮ ಪ್ರಮುಖ ಜೊತೆಗಿನ ಸಭೆ-ಸಮಾಲೋಚನೆಗಳಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಭಾಗಿಯಾಗಿದ್ದರು.