ಬೆಂಗಳೂರು | ಟಿಪ್ಪರ್ ಲಾರಿ ಢಿಕ್ಕಿ: ಪೌರಕಾರ್ಮಿಕ ಮಹಿಳೆ ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು : ಟಿಪ್ಪರ್ ಲಾರಿ ಢಿಕ್ಕಿಯಾದ ಪರಿಣಾಮ ಬಯೋಮೆಟ್ರಿಕ್ ಹಾಜರಾತಿ ನೀಡಲು ತೆರಳುತ್ತಿದ್ದ ಪೌರಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ಇಲ್ಲಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಗರ ಮೇಲ್ಸೇತುವೆಯ ಕೆಳಗೆ ವರದಿಯಾಗಿದೆ.
ಶ್ರೀರಾಂಪುರದ ನಿವಾಸಿ ಸರೋಜಮ್ಮ(51) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಎ.29ರ ಬೆಳಗ್ಗೆ 6:30ಕ್ಕೆ ಕೆಲಸಕ್ಕೆ ಹಾಜರಾಗಲು ತೆರಳುತ್ತಿದ್ದ ಸರೋಜಮ್ಮ ಬಯೋಮೆಟ್ರಿಕ್ ಹಾಜರಾತಿ ನೀಡಲು ವಾರ್ಡ್ ಆಫೀಸ್ ಕಡೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಸ್ತೆ ಸಿಗ್ನಲ್ ದಾಟುವಾಗ ಟಿಪ್ಪರ್ ಲಾರಿ ಢಿಕ್ಕಿಯಾಗಿದೆ ಎನ್ನಲಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಈ ಘಟನಾ ಸ್ಥಳಕ್ಕೆ ವಿಜಯನಗರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ರೆಡ್ ಸಿಗ್ನಲ್ ಇದ್ದಿದ್ದರಿಂದ ಮಹಿಳೆ ರಸ್ತೆ ದಾಟುತ್ತಿದ್ದರು. ತಕ್ಷಣ ಗ್ರೀನ್ ಸಿಗ್ನಲ್ ಬದಲಾಗಿದ್ದರಿಂದ ಟಿಪ್ಪರ್ ಚಾಲಕ ಮಹಿಳೆಯನ್ನು ಗಮನಿಸದೆ ಲಾರಿಯನ್ನು ಮುಂದೆ ಸಾಗಿದ್ದಾನೆ. ಇದರಿಂದ ಟಿಪ್ಪರ್‍ನ ಮುಂದಿನ ಚಕ್ರ ಹರಿದು ಮಹಿಳೆ ಮೃತಪಟ್ಟಿದ್ದಾರೆ. ಮುಂದಿನ 2 ದಿನಗಳಲ್ಲಿ ಆಕೆಗೆ ಖಾಯಂ ಪೌರಕಾರ್ಮಿಕ ನೇಮಕಾತಿ ಪತ್ರ ಹಸ್ತಾಂತರವಾಗಬೇಕಿತ್ತು ಎಂದು ಬಿಬಿಎಂಪಿ ಪೌರಕಾರ್ಮಿಕ ಸಿಬ್ಬಂದಿ ಮಾಹಿತಿ ನೀಡಿದರು.