ಅನಧಿಕೃತ ವಾಹನಗಳ ಸಂಚಾರ ನಿಯಂತ್ರಣಕ್ಕೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

ರಾಮಲಿಂಗಾರೆಡ್ಡಿ
ಬೆಂಗಳೂರು : ರಾಜ್ಯದಲ್ಲಿ ಅನಧಿಕೃತ ನೋಂದಣಿಯಾಗದಿರುವ ವಾಹನಗಳ ಸಂಚಾರವನ್ನು ಗಂಭೀರವಾಗಿ ಪರಿಗಣಿಸಿ, ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 5, 1989ರ ನಿಯಮ 46(2)ರ ಪ್ರಕಾರ, ಮರು ನೋಂದಣಿಗೆ ವಾಹನವನ್ನು ಸಂಬಂಧಿಸಿದ ನೋಂದಣಿ ಪ್ರಾಧಿಕಾರದ ಮುಂದೆ ಭೌತಿಕವಾಗಿ ಹಾಜರುಪಡಿಸಬೇಕಾಗಿದೆ ಎಂದರು.
ಒಂದು ರಾಜ್ಯದಲ್ಲಿ ನೋಂದಾಯಿತ ಮೋಟಾರು ವಾಹನವನ್ನು 12 ತಿಂಗಳುಗಳಿಗಿಂತ ಹೆಚ್ಚಿನ ಅವಧಿಗೆ ಮತ್ತೊಂದು ರಾಜ್ಯದಲ್ಲಿ ಕಾರ್ಯಾಚರಣೆ ಮಾಡಿದಲ್ಲಿ, ಅಂತಹ ವಾಹನದ ಮಾಲಕರು, ಕೇಂದ್ರ ಮೋಟಾರು ವಾಹನಗಳ ನಿಯಮಗಳ ಪ್ರಕಾರ ಮೂಲ ನೋಂದಣಿ ಪ್ರಾಧಿಕಾರದಿಂದ ನಮೂನೆ-28ರಲ್ಲಿ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ.) ಪಡೆದು, 30 ದಿನಗಳ ಒಳಗಾಗಿ ನಿಗದಿತ ಶುಲ್ಕ ಹಾಗೂ ತೆರಿಗೆ ಪಾವತಿಸಿ ಮರು ನೋಂದಣಿ ಸಂಖ್ಯೆ ಪಡೆಯಲು ನೋಂದಣಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.