ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಸಕಲ ಸಿದ್ಧತೆ

Update: 2025-01-24 21:51 IST
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಸಕಲ ಸಿದ್ಧತೆ
  • whatsapp icon

ಬೆಂಗಳೂರು : ಇಲ್ಲಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಾಳೆ(ಜ.26) ನಡೆಯಲಿರುವ ರಾಜ್ಯಮಟ್ಟದ 76ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಯಾವುದೇ ಸಮಸ್ಯೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜ.26ರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್  ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಹೇಳಿದ್ದಾರೆ.

ಶುಕ್ರವಾರ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾರಂಭಕ್ಕೆ ಆಗಮಿಸುವವರು ಬೆಳಗ್ಗೆ 8:30ರ ಒಳಗಾಗಿ ತಮ್ಮ ಆಸನಗಳಲ್ಲಿ ಆಸೀನರಾಗಬೇಕು. ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆ ಮೂಲಕ ಗೇಟ್ ನಂ.5ರಿಂದ ಪ್ರವೇಶಿಸಬೇಕು ಎಂದರು.

ರಾಜ್ಯಪಾಲರ ಧ್ವಜಾರೋಹಣ ಮತ್ತು ಸಂದೇಶದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ ಮಕ್ಕಳು ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಗರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ 800 ವಿದ್ಯಾರ್ಥಿಗಳಿಂದ ‘ನಾವೆಲ್ಲಾರೂ ಒಂದೇ ನಾವು ಭಾರತೀಯರು’, ಹೇರೋಹಳ್ಳಿಯ ಬಿಬಿಎಂಪಿ ಪಿಯು ಕಾಲೇಜಿನ 650 ವಿದ್ಯಾರ್ಥಿಗಳಿಂದ ‘ಅರಿವೇ ಅಂಬೇಡ್ಕರ್‌’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸೇನಾ ಸಿಬ್ಬಂದಿಯಿಂದ ಕಸರತ್ತು ನಡೆಯಲಿದೆ ಎಂದು ವಿವರಿಸಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ತಮ್ಮೊಂದಿಗೆ ಅನಗತ್ಯವಾದ ಬ್ಯಾಗೇಜ್ ಹಾಗೂ ಇತರೆ ವಸ್ತುಗಳನ್ನು ತರುವಂತಿಲ್ಲ. ಯಾವುದಾದರೂ ಅನುಮಾನಾಸ್ಪದ ವಸ್ತುಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಭದ್ರತೆಯ ಅಂಗವಾಗಿ ಮೈದಾನಕ್ಕೆ ಆಗಮಿಸುವವರು ಗೇಟ್‍ಗಳ ಬಳಿ ತಪಾಸಣೆಗೆ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.

ಸುದ್ದಿಗೋಷ್ಟಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಜಗದೀಶ್ ಇದ್ದರು.

ಪೊಲೀಸ್ ಭದ್ರತೆ :

8 ಮಂದಿ ಡಿಸಿಪಿ, 17 ಮಂದಿ ಎಸಿಪಿ, 44 ಮಂದಿ ಪಿಐ, 114 ಮಂದಿ ಪಿಎಸ್‍ಐ, 58 ಮಂದಿ ಎಎಸ್‍ಐ, 80 ಮಂದಿ ಸಿಬ್ಬಂದಿ, 30 ಜನ ಕ್ಯಾಮೆರಾ ಸಿಬ್ಬಂದಿ ಸೇರಿದಂತೆ ಒಟ್ಟು 1,051 ಜನ ಅಧಿಕಾರಿಗಳು ಭದ್ರತೆಗೆ ಇರುತ್ತಾರೆ. ಬಂದೋಬಸ್ತ್‌ಗೆ 10 ಕೆಎಸ್‍ಆರ್‍ಪಿ ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ತಂಡ ಇರುತ್ತದೆ. ಮೈದಾನದ ಸುತ್ತ 103 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.

ಕಲರ್ ಕೋಡ್‍ಗಳ ಮೂಲಕ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಪಿಂಕ್ ಬಣ್ಣದ ಪಾಸ್ ನೀಡಲಾಗುತ್ತದೆ. ವಿಐಪಿ ಪಾಸ್ ಗೇಟ್-2ರ ಮೂಲಕ ಪ್ರವೇಶಿಸಬಹುದಾಗಿದೆ. ಮುಖ್ಯ ಅತಿಥಿಗಳು, ಗಣ್ಯರು ಗೇಟ್-3 ಮೂಲಕ ಪ್ರವೇಶಿಸಬಹುದಾಗಿದೆ.

ಸಂಚಾರ ನಿರ್ಬಂಧ :

ಜ.26ರಂದು ಬೆಳಗ್ಗೆ 8.30 ರಿಂದ 10.30ರವರೆಗೆ ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬಿಆರ್‍ವಿ ರಸ್ತೆಯಲ್ಲಿ ವಾಹನ ಸಂಚಾರ ನಿಬರ್ಂಧಿಸಲಾಗಿದೆ. ಈ ವೇಳೆ ಪರ್ಯಾಯ ಮಾರ್ಗವನ್ನು ಅನುಸರಿಸಬೇಕಾಗಿರುತ್ತದೆ.

ಇನ್‍ಫೆಂಟ್ರಿರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‍ಫೆಂಟ್ರಿ ರಸ್ತೆಯ ಸಫೀನಾ ಪ್ಲಾಜಾ ಎಡ ತಿರುವು ಪಡೆದು ಮೈನ್‍ಗಾರ್ಡ್ ರಸ್ತೆ- ಆಲೀಸ್ ಸರ್ಕಲ್- ಡಿಸ್ಪೆನ್ಸರಿ ರಸ್ತೆ- ಕಾಮರಾಜರಸ್ತೆ ಮತ್ತು ಡಿಕನ್ಸನ್‍ರಸ್ತೆ ಜಂಕ್ಷನ್ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್‍ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‍ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್‍ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದಾಗಿದೆ.

ಕಬ್ಬನ್‍ರಸ್ತೆಯಲ್ಲಿ, ಮಣಿಪಾಲ್ ಸೆಂಟರ್ ಜಂಕ್ಷನ್‍ನಿಂದ ಬಿ.ಆರ್.ವಿ. ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್ ಬಳಿ ನಿಬರ್ಂಧಿಸಿದ್ದು, ವಾಹನಗಳು ವೆಬ್ಸ್ ಜಂಕನ್ ಬಳಿ ಬಲ ತಿರುವು ಪಡೆದು ಎಂ.ಜಿ. ರಸ್ತೆಯ ಮೂಲಕ ಮೆಯೋ ಹಾಲ್, ಕಾವೇರಿ ಎಂಪೋರಿಯಂ, ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಮುಂದೆ ಸಾಗಬಹುದು.

ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್‍ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್ ಸ್ಟ್ರೀಟ್‍ನಲ್ಲಿ ಸಾಗಿ, ಬಲಕ್ಕೆ ತಿರುವು ಪಡೆದು-ಇನ್‍ಫೆಂಟ್ರಿ ರಸ್ತೆ- ಸಫೀನಾ ಪ್ಲಾಜಾ-ಎಡಕ್ಕೆ ತಿರುವು ಪಡೆದು ಮೈನ್‍ಗಾರ್ಡ್ ರಸ್ತೆ- ಆಲಿ ಸರ್ಕಲ್- ಡಿಸ್ಪೆನ್ಸರಿರಸ್ತೆ ಕಾಮರಾಜರಸ್ತೆ ಮತ್ತು ಡಿಕನ್ಸನ್‍ರಸ್ತೆ ಜಂಕ್ಷನ್-ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್‍ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್‍ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದಾಗಿದೆ.

ವಾಹನ ನಿಲುಗಡೆಗೆ ನಿಷೇಧ :

ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಶಿವಾಜಿನಗರ ಬಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ, ಕಬ್ಬನ್ ಜಂಕ್ಷನ್‍ವರೆಗೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News