ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ : ಸಿ.ಟಿ.ರವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಬೆಂಗಳೂರು : ಬೆಳಗಾವಿ ಅಧಿವೇಶನದ ವೇಳೆ ಪರಿಷತ್‍ನಲ್ಲಿ ಡಾ.ಅಂಬೇಡ್ಕರ್ ವಿರುದ್ದ ಅಮಿತ್ ಶಾ ಹೇಳಿಕೆ ಖಂಡಿಸಿ ಧ್ವನಿ ಎತ್ತಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸದಸ್ಯ ಸಿ.ಟಿ. ರವಿ ಕೆಟ್ಟಪದ ಪ್ರಯೋಗ ಮಾಡಿರುವುದರ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದ ನಿಯೋಗ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಸಿ.ಟಿ.ರವಿ ನೇರವಾಗಿ ಕೆಟ್ಟಪದ ಬಳಕೆ ಮಾಡಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರನ್ನು ಅಪಮಾನಿಸಿದ್ದಾರೆ. ಅವರ ಹೇಳಿಕೆ ಮಹಿಳೆಯರ ವ್ಯಕ್ತಿತ್ವಕ್ಕೆ ಅಗೌರವ ತಂದಿದೆ ಹಾಗೂ ಅಪಮಾನಗೊಳಿಸಿದೆ. ಇಂತಹ ಹೇಳಿಕೆಗಳು ಸಮಾಜದಲ್ಲಿನ ಹೆಣ್ಣು ಮಕ್ಕಳ ಬಾಳಿಗೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ಅರಿತಿದ್ದರೂ ಬಿಜೆಪಿ ಪಕ್ಷದ ಸಿ.ಟಿ.ರವಿ ಮಾಡಿರುವ ಈ ನೇರ ಹೇಳಿಕೆಯಿಂದ ಸಮಾಜ ತಲೆ ತಗ್ಗಿಸುವಂತೆ ಆಗಿದೆ. ಆದ್ದರಿಂದ ಆಯೋಗ ಈ ಕೂಡಲೇ ಪ್ರಕರಣ ದಾಖಲಿಸಿಕೊಂಡು ಸಿ.ಟಿ.ರವಿ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.