ಆನೇಕಲ್ | ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Update: 2024-05-12 10:36 GMT

 ಅಮೃತೇಶ್ ಪಾಂಡೆ(21)

ಆನೇಕಲ್ : ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಬಿಹಾರ ಮೂಲದ ಅಮೃತೇಶ್ ಪಾಂಡೆ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹೇಮಲತಾ ಪಾಂಡೆ, ವಿಜಯ್ ಶಂಕರ್ ದಂಪತಿ ಪುತ್ರ ಅಮೃತೇಶ್ ಕೆಲ ವರ್ಷಗಳ ಹಿಂದೆ ಜಿಗಣಿಗೆ ಬಂದು ನೆಲೆಸಿದ್ದ. ಮಗನನ್ನು ಮೈಸೂರು ರಸ್ತೆಯ ಆರ್.ವಿ ಕಾಲೇಜಿಗೆ ಸೇರಿಸಿದ್ದರು. ಅದರಂತೆ ಅಮೃತೇಶ್ 3ನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು,  ಕಾಲೇಜಿಗೆ ಆಗಾಗ ಗೈರು ಹಾಜರಾಗಿ ಎರಡು ವಿಷಯದಲ್ಲಿ ಫೇಲ್‌ ಆಗಿದ್ದ ಎನ್ನಲಾಗಿದೆ. ಈ ವಿಚಾರ ಪೋಷಕರಿಗೆ ತಿಳಿಯುತ್ತದೆ ಎಂದು ನೊಂದು ಕೆರೆಗೆ ಹಾರಿದ್ದಾನೆ ಎಂದು ತಿಳಿದು ಬಂದಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಕಾಲೇಜಿನವರು ಅಪ್ಪನಿಗೆ ಫೋನ್ ಮಾಡುತ್ತಾರೆ ಎಂದು ತಂದೆ ಫೋನ್​ನಲ್ಲಿದ್ದ ನಂಬರ್​ಗಳನ್ನು ಬ್ಲಾಕ್ ಮಾಡಿದ್ದ. ಈ ವೇಳೆ ಆರನೇ ಸೆಮಿಸ್ಟರ್​ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರುತ್ತೀನಿ ಎಂದು ಅಮೃತೇಶ್ ತಂದೆ ಹೇಳಿದ್ದರು. ತಂದೆಯ ಜೊತೆ ಕಾಲೇಜಿಗೆ ಹೋದರೆ ಫೇಲ್ ಆದ ವಿಚಾರ ತಿಳಿಯುತ್ತದೆ ಎಂದು ಹೆದರಿ 10ನೇ ತಾರೀಖಿನಂದು ಮನೆಯಿಂದ ಹೊರಟ ಅಮೃತೇಶ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಮಗನ ನಾಪತ್ತೆ ಬಳಿಕ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದು,  ಜಿಗಣಿ ಕೆರೆಯಲ್ಲಿ ಮೃತದೇಹ ತೇಲಿಕೊಂಡು ಬಂದಿದೆ. ಮೃತ ದೇಹ ತೇಲುವುದನ್ನು ಕಂಡ ಸ್ಥಳೀಯರು ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News