ಸರಕಾರದ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿ ದೊರೆತಿದೆ : ಶಾಸಕ ಸುನೀಲ್ ಕುಮಾರ್

ವಿ.ಸುನೀಲ್ ಕುಮಾರ್
ಬೆಂಗಳೂರು, ಎ.10: ಕಾಂಗ್ರೆಸ್ ಸರಕಾರದ 100 ಪರ್ಸೆಂಟ್ ಭ್ರಷ್ಟಾಚಾರ ದಂಧೆಗೆ ಈಗ ಮತ್ತೊಂದು ಸಾಕ್ಷಿ ದೊರೆತಿದೆ. ರಾಜ್ಯ ಗುತ್ತಿಗೆದಾರರ ಸಂಘವು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಗುತ್ತಿಗೆದಾರರ ಸಂಘವು ರಾಜ್ಯ ಸರಕಾರದ ಮೂರು ಇಲಾಖೆಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದೆ. ಕಾಂಗ್ರೆಸ್ ಸರಕಾರದ 100 ಪರ್ಸೆಂಟ್ ಭ್ರಷ್ಟಾಚಾರ ದಂಧೆಗೆ ಇದು ಮತ್ತೊಂದು ಸಾಕ್ಷಿಯಾಗಿದೆ ಎಂದಿದ್ದಾರೆ.
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಸತ್ಯ ಶೋಧನೆ ಮಾಡಿದ ಬೆನ್ನಲ್ಲೇ, ಗುತ್ತಿಗೆದಾರರ ಸಂಘ ಮಾಡಿದ ಈ ಆರೋಪ ಕಾಂಗ್ರೆಸ್ ಸರಕಾರದ ಕಾರ್ಯ ವೈಖರಿಗೆ ಮಾಡಿದ ಮಂಗಳಾರತಿಯಷ್ಟೇ ಅಲ್ಲ, ಕಪಾಳ ಮೋಕ್ಷವೂ ಹೌದು ಎಂದು ಸುನೀಲ್ ಕುಮಾರ್ ಟೀಕಿಸಿದ್ದಾರೆ.