ಬೆಂಗಳೂರು| ಕಸ ಎಸೆದಿದ್ದನ್ನು ಪ್ರಶ್ನಿಸಿದ್ದ ಪ್ರೊಫೆಸರ್ ಮೇಲೆ ಹಲ್ಲೆ: ಮೂವರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು: ಚಲಿಸುತ್ತಿದ್ದ ಆಟೋರಿಕ್ಷಾದೊಳಗೆ ಕುಳಿತು ಕಸ ಎಸೆದಿದ್ದನ್ನು ಪ್ರಶ್ನಿಸಿದ್ದ ಪ್ರೊಫೆಸರ್ ಮೇಲೆ ಹಲ್ಲೆಗೈದಿದ್ದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಭಾನುಪ್ರಸಾದ್(26), ಶರತ್(23) ಹಾಗೂ ಅಮೃತ್ ಕುಮಾರ್(24) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ದಯಾನಂದ ಸಾಗರ್ ಕಾಲೇಜ್‍ನ ಪ್ರೊಫೆಸರ್ ಅರಬಿಂದೋ ಗುಪ್ತಾ ಎಂಬುವವರ ಮೇಲೆ ಹಲ್ಲೆಗೈದಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಎಪ್ರಿಲ್ 21ರಂದು ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ಜೆಎಚ್‍ಬಿಸಿಎಸ್ ಲೇಔಟ್‍ನಲ್ಲಿ ಘಟನೆ ನಡೆದಿತ್ತು. ಆಟೋ ರಿಕ್ಷಾದೊಳಗೆ ಕುಳಿತಿದ್ದ ಆರೋಪಿಗಳು ಕಸ, ಗ್ಲಾಸ್‍ಗಳನ್ನು ರಸ್ತೆಗೆ ಎಸೆಯುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್‍ನಲ್ಲಿ ಸಾಗುತ್ತಿದ್ದ ಅರಬಿಂದೋ ಗುಪ್ತಾ, ‘ಈ ರೀತಿ ಕಸ ಎಸೆಯಬೇಡಿ, ಇತರೆ ವಾಹನಗಳು ಸ್ಕಿಡ್ ಆಗುವ ಸಾಧ್ಯತೆಯಿರುತ್ತದೆ’ ಎಂದು ಆರೋಪಿಗಳಿಗೆ ಸೂಚಿಸಿದ್ದರು. ಅಷ್ಟಕ್ಕೆ ಸಿಟ್ಟಿಗೆದ್ದ ಆರೋಪಿಗಳು ಆಟೋದಿಂದ ಇಳಿದು ಅರಬಿಂದೋ ಗುಪ್ತಾ ಅವರ ಮೇಲೆ ಹಲ್ಲೆಗೈದಿದ್ದರು.
‘ತಪ್ಪನ್ನು ಪ್ರಶ್ನಿಸಿದ್ದಕ್ಕೆ ಮೂವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. 20-30 ವರ್ಷಗಳ ಹಿಂದೆ ಸುರಕ್ಷಿತ ನಗರ ಎಂದು ಬೆಂಗಳೂರನ್ನು ಕರೆಯಲಾಗುತ್ತಿತ್ತು. ಆದರೆ ಇಂದು ಬೆಂಗಳೂರಿನ ಹೆಸರನ್ನು ಹಾಳು ಮಾಡಲಾಗುತ್ತಿದೆ. ಈ ರೀತಿಯ ಗೂಂಡಾವರ್ತನೆ ಸಹಿಸಲು ಸಾಧ್ಯವಿಲ್ಲ’ ಎಂದು ಅರಬಿಂದೋ ಗುಪ್ತಾ ಅವರು ವೀಡಿಯೋ ಮಾಡಿ ಘಟನೆಯನ್ನು ವಿವರಿಸಿದ್ದರು.
ಘಟನೆ ಸಂಬಂಧ ಅರಬಿಂದೋ ಗುಪ್ತಾ ಅವರು ನೀಡಿದ ದೂರಿನನ್ವಯ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದ ಪೊಲೀಸರು, ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.