ಒಕ್ಕೂಟ ವ್ಯವಸ್ಥೆಯ ʼಗ್ಯಾರೆಂಟಿ ಚೆಕ್ʼ ವರದಿ ಪ್ರಕಟಿಸಿದ ಬಹುತ್ವ ಕರ್ನಾಟಕ
ಬೆಂಗಳೂರು: ಹಿಂದಿನ 10 ವರ್ಷಗಳಲ್ಲಿ ಕೇಂದ್ರ ಸರಕಾರವು ರಾಜ್ಯಗಳನ್ನು ಆರ್ಥಿಕವಾಗಿ ಬಲಹೀನಗೊಳಿಸಿದ್ದು, ರಾಜ್ಯಗಳ ಬಹುಭಾಷೆ ಬಹುತ್ವ ಸಂಸ್ಕೃತಿ ಮೇಲೆ ದಾಳಿ ಮಾಡಿದೆ. ಕಾನೂನು, ನೀತಿ ಹಾಗು ಆಡಳಿತ ಕ್ರಮಗಳ ಮೂಲಕ ಸಂವಿಧಾನಾತ್ಮಕ ತತ್ವವಾದ ಒಕ್ಕೂಟ ವ್ಯವಸ್ಥೆಗೆ ಎನ್‍ಡಿಎ ಸರಕಾರ ಧಕ್ಕೆ ತಂದಿದೆ ಎಂದು ಬಹುತ್ವ ಕರ್ನಾಟಕವು ಆರೋಪಿಸಿದೆ.
ಬಹುತ್ವ ಕರ್ನಾಟಕವು ಕೇಂದ್ರ ಸರಕಾರದ ವೈಪಲ್ಯಗಳ ಕುರಿತಾಗಿ ‘ಗ್ಯಾರೆಂಟಿ ಚೆಕ್’ ಎನ್ನುವ ವರದಿಗಳನ್ನು ಬಿಡುಗಡೆ ಮಾಡುತ್ತಿದ್ದು, ಇದರ ಭಾಗವಾಗಿ ‘ಒಕ್ಕೂಟ ವ್ಯವಸ್ಥೆ(ಫೆಡೆರಲಿಸಂ)’ ಎಂಬ ಗ್ಯಾರೆಂಟಿ ಚೆಕ್ ವರದಿಯನ್ನು ಬುಧವಾರದಂದು ಪ್ರಕಟಿಸಿದೆ.
ರಾಷ್ಟ್ರದ ಪ್ರಗತಿಗೆ ಒಕ್ಕೂಟ ಹಾಗು ರಾಜ್ಯ ಸರ್ಕಾರಗಳ ನಡುವೆ ಸಹಕಾರ ಬಹಳ ಮುಖ್ಯ ಎಂದು ಸಂವಿಧಾನ ಹೇಳುತ್ತದೆ. ಆದರೆ ವಾಸ್ತವವಾಗಿ ಕೇಂದ್ರವು ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸಿದೆ. ‘ಡಬಲ್ ಇಂಜಿನ್ ಸರಕಾರ’ವನ್ನೇ ಆದರ್ಶ ಎಂದು ಬಿಂಬಿಸುತ್ತಾ, ಯಾವ ರಾಜ್ಯಗಳು ಬಿಜೆಪಿಯನ್ನು ಗೆಲ್ಲಿಸುತ್ತಾವೋ ಅವುಗಳಿಗೆ ಮಾತ್ರ ಸಹಕಾರ ನೀಡಿದೆ ಎಂದು ಟೀಕಿಸಿದೆ.
ಒಕ್ಕೂಟ ಸರಕಾರದ ಕೆಲವೊಂದು ಯೋಜನೆಗಳಲ್ಲಿ ರಾಜ್ಯ ಸರಕಾರಗಳೆ ಶೇ.75ರಷ್ಟು ಅನುದಾನ ನೀಡಿವೆ. ಆದರೆ ಸಂಪೂರ್ಣ ಹೆಸರು, ಮನ್ನಣೆ ಕೇಂದ್ರ ಸರಕಾರಕ್ಕೆ ಸಿಕ್ಕಿದೆ. ಅಲ್ಲದೆ ಈ ಯೋಜನೆಗಳ ಸ್ವರೂಪದಲ್ಲಿ ರಾಜ್ಯ ಸರಕಾರಗಳಿಗೆ ಪಾತ್ರವೇ ಇಲ್ಲದಂತಾಗಿದೆ. ಎನ್‍ಐಎ ಕಾಯ್ದೆಗೆ ತಿದ್ದುಪಡಿ ತಂದು, ರಾಜ್ಯ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳನ್ನೂ ಎನ್‍ಐಎ ತನಿಖೆ ಮಾಡುವ ಹಾಗೆ ಮಾಡಿತು. ಸಿಬಿಐ, ಈಡಿಯನ್ನು ದುರುಪಯೋಗಪಡಿಸಿ, ವಿರೋಧ ಪಕ್ಷಗಳ ಸರಕಾರಗಳನ್ನು ಗುರಿ ಮಾಡಲಾಯಿತು ಎಂದು ಟೀಕಿಸಿದೆ.
ಹತ್ತು ವರ್ಷಗಳಲ್ಲಿ ಒಕ್ಕೂಟ ಸರಕಾರ ಕೈಗೊಂಡ ಅನೇಕ ಕ್ರಮಗಳಿಂದ ರಾಜ್ಯ ಸರಕಾರಗಳು ಒಕ್ಕೂಟ ಸರಕಾರದ ಜೊತೆ ಪ್ರತಿರೋಧವನ್ನು ಹೊಂದಿರುವಂತೆ ಆಗಿದೆ. ಎನ್‍ಇಪಿ, ನೀಟ್ ಮುಂತಾದವುಗಳನ್ನು ರಾಜ್ಯ ಸರಕಾರದ ಸಹಮತವಿಲ್ಲದೆ ಜಾರಿಗೆ ತಂದಿತು. ಸಹಕಾರ ಕ್ಷೇತ್ರವು ರಾಜ್ಯ ವಿಷಯವಾದರೂ 2021ರಲ್ಲಿ ಒಕ್ಕೂಟ ಸರಕಾರ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿತು ಎಂದು ಹೇಳಿದೆ.
ಅದೇ ರೀತಿ, ಕೃಷಿಯು ಸಂವಿಧಾನದ ಅಡಿಯಲ್ಲಿ ರಾಜ್ಯಗಳು ನಿರ್ಧರಿಸಬೇಕಾದ ವಿಷಯವಾಗಿದ್ದರೂ, ಒಕ್ಕೂಟ ಸರಕಾರವು ರಾಜ್ಯ ಸರಕಾರಗಳನ್ನು ಸಮಾಲೋಚಿಸದೆ 3 ಕೃಷಿ ಮಸೂದೆಗಳನ್ನು 2020ರಲ್ಲಿ ಜಾರಿಗೆ ತಂದು ಭಾರಿ ದುಷ್ಪರಿಣಾಮಗಳನ್ನು ಉಂಟು ಮಾಡಿತು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
2019ರಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು, ಆ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದಾಗ, ಚುನಾಯಿತ ಪ್ರತಿನಿಧಿಗಳ ಒಪ್ಪಿಗೆಯಿಲ್ಲದೆ ಹಿಂತೆಗೆದುಕೊಳ್ಳಲಾಯಿತು. ಸುಪ್ರೀಂ ಕೋರ್ಟ್ ತೀರ್ಪನ್ನು ತಳ್ಳಿಹಾಕಲು ಮತ್ತು ದಿಲ್ಲಿ ಸರಕಾರದ ಅಧಿಕಾರವನ್ನು ಕಸಿದುಕೊಳ್ಳಲು ದಿಲ್ಲಿ ಸೇವಾ ಮಸೂದೆಯನ್ನು ಅಂಗೀಕರಿಸಲಾಯಿತು ಎಂದು ಹೇಳಿದೆ.
ಗವರ್ನರ್ ಗಳು ಶಾಸನಗಳನ್ನು ವಿರೋಧಿಸುವುದರ ಮೂಲಕ, ರಾಜ್ಯಗಳ ಆಡಳಿತದಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಮತ್ತು ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಲು ನಿರಾಕರಿಸುತ್ತಿದ್ದಾರೆ. ಮುಖ್ಯವಾಗಿ, ರಾಜ್ಯಗಳು ನ್ಯಾಯಾಲಯದ ಮೊರೆ ಹೋಗುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ಬಹುತ್ವ ಕರ್ನಾಟಕವು ಆತಂಕ ವ್ಯಕ್ತಪಡಿಸಿದೆ.
ರಾಜ್ಯಗಳಿಗೆ ಸಿಗಬೇಕಾದ ಪಾಲನ್ನು ಕಡಿತಗೊಳಿಸಲಾಗಿದೆ. ಜೊತೆಗೆ ಕರ್ನಾಟಕದಂತಹ ರಾಜ್ಯಗಳಿಗೆ ಬರ ಪರಿಹಾರವನ್ನು ಮಂಜೂರು ಮಾಡಿಲ್ಲ. ಕೇಂದ್ರವು ವಿಧಿಸುವ ಷರತ್ತುಗಳನ್ನು ರಾಜ್ಯಗಳು ಒಪ್ಪಿಕೊಂಡರೆ ಮಾತ್ರ ಕೇಂದ್ರ ಯೋಜನೆಗಳಿಗೆ ಹಣವನ್ನು ನೀಡಲಾಗುತ್ತಿದೆ. ಹಣಕಾಸು ಆಯೋಗವು ಕಡ್ಡಾಯಗೊಳಿಸಿದ ವಿಶೇಷ ಅನುದಾನವನ್ನು ಕರ್ನಾಟಕದಂತಹ ರಾಜ್ಯಗಳಿಗೆ ಇಲ್ಲಿವರೆಗೂ ನೀಡಿಲ್ಲ ಎಂದು ಖಂಡಿಸಿದೆ.
ವಿಭಿನ್ನ ಗುರುತುಗಳನ್ನು ಅಳಿಸಿ ಹಾಕಲು ಮತ್ತು ಭಾರತವನ್ನು ಒಂದು ಹಿಂದಿ -ಹಿಂದೂ ರಾಷ್ಟ್ರವನ್ನಾಗಿ ಮಾಡಲು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಆ ಮೂಲಕ ಎನ್‍ಡಿಎ ಸರಕಾರವು ಕೇಂದ್ರೀಕರಣಕ್ಕೆ ಒತ್ತಾಯಿಸುತ್ತಿದೆ. ಒಂದು ರಾಷ್ಟ್ರ ಒಂದು ನೋಂದಣಿ ಯೋಜನೆಯು ರಾಜ್ಯ ಸರಕಾರಗಳಿಂದ ಆದಾಯವನ್ನು ಕಸಿದುಕೊಳ್ಳುತ್ತದೆ ಎಂದು ತಿಳಿಸಿದೆ.
ಕೊವಿಡ್, ನೋಟ್ ರದ್ಧತಿ, 370 ವಿಧಿಯ ರದ್ಧತಿ, ಪೌರ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು, ಕೃಷಿ ಕಾನೂನುಗಳ ವಿರುದ್ಧ ಕೃಷಿಕರ ಪ್ರತಿಭಟನಗಳು, ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ನ ಹೇರಿಕೆ ಮುಂತಾದವುಗಳಿಂದ ಆಗಿರುವ ಸಾವುಗಳ ಸಂಖ್ಯೆ 1,984 ಆಗಿದೆ. ಇವುಗಳು ಒಕ್ಕೂಟ ಸರಕಾರದ ಸಂವಿಧಾನ ವಿರೋಧಿ ನೀತಿಗಳಿಂದ ಆಗಿರುವ ಸಾವುಗಳಾದರೂ ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಬಹುತ್ವ ಕರ್ನಾಟಕ ದೂರಿದೆ.
ಗಂಭೀರ ಸ್ವರೂಪದ ಕ್ಷೇತ್ರ ಪುನರ್ ವಿಂಗಡಣೆ: 2026ರಲ್ಲಿ ದೇಶಾದ್ಯಂತ ಕ್ಷೇತ್ರ ಪುನರ್ ವಿಂಗಡಣೆ ನಡೆಯಲಿದೆ. ತಮಿಳುನಾಡು, ಕೇರಳ, ಕರ್ನಾಟಕ ಮುಂತಾದ ದಕ್ಷಿಣ ರಾಜ್ಯಗಳು ಫಲವತ್ತತೆಯ ದರ ಕಡಿಮೆಯಾಗಿಸಿ ಜನಸಂಖ್ಯೆಯನ್ನು ನಿಯಂತ್ರಣ ಮಾಡುವುದರಲ್ಲಿ ಉತ್ತಮ ಪ್ರಗತಿ ತೋರಿವೆ. ಆರೋಗ್ಯ, ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿಯೂ ಪ್ರಗತಿ ಹೊಂದಿವೆ. ದುರದೃಷವೆಂದರೆ ಈ ಕ್ಷೇತ್ರ ಪುನರ್ ವಿಂಗಡಣೆಯ ಯೋಜನೆಯು, ಈ ರಾಜ್ಯಗಳು ಮಾಡಿರುವ ಪ್ರಗತಿಗೆ ಸಿಗುವ ಶಿಕ್ಷೆಯಾಗಿದೆ. ಅಂದರೆ, ಪುನರ್ ವಿಂಗಡಣೆಯ ಮೂಲಕ ಈ ರಾಜ್ಯಗಲ್ಲಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುವುದು ಎಂದು ಬಹುತ್ವ ಕರ್ನಾಟಕವು ತಿಳಿಸಿದೆ.