ಬೆಂಗಳೂರು | ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿಗನ ಬಂಧನ : 4 ಕೋಟಿ ರೂ. ಮೌಲ್ಯದ ಮಾಲು ವಶ

Update: 2024-04-08 14:18 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ವ್ಯವಹಾರದ ವೀಸಾದಡಿ ಭಾರತಕ್ಕೆ ಬಂದು ಅವ್ಯವಾಹತವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ವಿದೇಶಿ ಪ್ರಜೆಯನ್ನು ಬಂಧಿಸಿರುವ ಸಿಸಿಬಿ ಮಾದಕ ದ್ರವ್ಯ ನಿಗ್ರಹ ಅಧಿಕಾರಿಗಳು, ಆರೋಪಿಯಿಂದ 4 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‍ಗಳನ್ನು ಜಪ್ತಿ ಮಾಡಿದ್ದಾರೆ.

2022ರಲ್ಲಿ ವ್ಯವಹಾರದ ವೀಸಾದಡಿ ಭಾರತಕ್ಕೆ ಬಂದಿದ್ದ ಹೆನ್ರಿ ಔಕಮೇಕ್ ಎಂಬಾತನನ್ನು ಬಂಧಿಸಲಾಗಿದೆ. ಈತ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಡ್ರಗ್ಸ್ ದಂಧೆಗಿಳಿದು ಹೊಸದಿಲ್ಲಿ ಹಾಗೂ ಮುಂಬೈ ಮೂಲದ ಡ್ರಗ್‌ ಪೆಡ್ಲರ್ ಸಂಪರ್ಕ ಸಾಧಿಸಿ ಅವರಿಂದ ಕೊರಿಯರ್ ಮೂಲಕ ಎಂಡಿಎಂಎ ಕ್ರಿಸ್ಟೆಲ್ ತರಿಸಿಕೊಳ್ಳುತ್ತಿದ್ದ. ಈ ಬಗ್ಗೆ ಯಾರಿಗೂ ಅನುಮಾನ ಬರದಂತೆ ವ್ಯಾನಿಟಿ ಬ್ಯಾಗ್‍ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮನೆ ಪರಿಶೀಲಿಸಿದಾಗ ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್‍ಗಳು ಸಿಕ್ಕಿವೆ ಎನ್ನಲಾಗಿದೆ.

ಆರೋಪಿ 1 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‍ಗೆ 8 ಸಾವಿರದಿಂದ 10 ಸಾವಿರ ರೂ.ಗಳಂತೆ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ. ವಾಟ್ಸ್ ಆ್ಯಪ್ ಮೂಲಕ ಲೊಕೇಷನ್ ಹಾಕಿ ನಿರ್ದಿಷ್ಟ ಜಾಗದಲ್ಲಿ ಮಾದಕ ವಸ್ತು ಇಟ್ಟಿರುವುದಾಗಿ ಹೇಳಿ ಆನ್‍ಲೈನ್ ಮೂಲಕ ಹಣ ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News