ಬೆಂಗಳೂರು| ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ: 16 ಪ್ರಯಾಣಿಕರು ವಶಕ್ಕೆ
ಬೆಂಗಳೂರು: ವಿವಿಧ ಕಡೆಗಳಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ 11 ಮಹಿಳೆಯರು ಸೇರಿದಂತೆ 16 ಪ್ರಯಾಣಿಕರನ್ನು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು 2 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.
ವಿವಿಧ ದೇಶಗಳ ಪ್ರಮುಖ ನಗರಗಳಾದ ಕೌಲಾಲಂಪುರ, ಜೆಡ್ಡಾ, ಶಾರ್ಜಾ ಮತ್ತು ಬ್ಯಾಂಕಾಕ್‍ಗಳಿಂದ ಪ್ರತ್ಯೇಕ ವಿಮಾನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಲವು ಪ್ರಯಾಣಿಕರನ್ನು ತಡೆದು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಆ ವೇಳೆ ಶೂ, ಸಾಕ್ಸ್, ಉಡುಪುಗಳು, ಕರವಸ್ತ್ರ ಹಾಗೂ ಒಳ ಉಡುಪುಗಳಲ್ಲಿ ಅಡಗಿಸಿಟ್ಟುಕೊಂಡು ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದಿರುವುದು ಪತ್ತೆಯಾಗಿದೆ. ತಕ್ಷಣ 11 ಮಂದಿ ಮಹಿಳೆಯರು ಹಾಗೂ ಐದು ಮಂದಿ ಪುರುಷರನ್ನು ವಶಕ್ಕೆ ಪಡೆದು 3311 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ.
ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.