ಬೆಂಗಳೂರು| ವೇಶ್ಯಾವಾಟಿಕೆ ದಂಧೆ: ಟರ್ಕಿ ಮೂಲದ ಮಹಿಳೆ ಸೇರಿ ಐವರ ಬಂಧನ

Update: 2024-01-09 12:40 GMT

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ಸೆಳೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ವಿದೇಶಿ ಮಹಿಳೆಯ ಸಹಿತ ಐವರು ಆರೋಪಿಗಳನ್ನು ಬೆಂಗಳೂರು ಪೂರ್ವ ವಿಭಾಗದ ಬೈಯ್ಯಪ್ಪನಹಳ್ಳಿ ಹಾಗೂ ಹಲಸೂರು ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಟರ್ಕಿ ಮೂಲದ ಬಯೋನ್ಯಾಜ್, ಬಿ.ಇ. ಪದವೀಧರನಾಗಿರುವ ವೈಶಾಖ್, ತಮಿಳುನಾಡು ಮೂಲದ ಸಾಫ್ಟ್‍ವೇರ್ ಇಂಜಿನಿಯರ್ ಗೋವಿಂದರಾಜು, ಪ್ರಕಾಶ್ ಹಾಗೂ ಅಕ್ಷಯ್ ಎಂಬುವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ದೊಮ್ಮಲೂರಿನ ಎಚ್‍ಎಸ್‍ಬಿಸಿ ಲೇಔಟ್‍ನಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಹಲಸೂರು ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ಬಳಿಕ ಪ್ರಕರಣದ ಮುಂದಿನ ತನಿಖೆಯ ಜವಾಬ್ದಾರಿಯನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರಿಗೆ ವಹಿಸಲಾಗಿತ್ತು. ತನಿಖೆ ಮುಂದುವರೆಸಿದ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬೆಂಗಳೂರು ಡೇಟಿಂಗ್ ಕ್ಲಬ್ ಹೆಸರಿನ ಟೆಲಿಗ್ರಾಂ ಗ್ರೂಪ್ ನಿರ್ವಹಿಸುತ್ತಿದ್ದ ಆರೋಪಿ ವೈಶಾಖ್‍ನನ್ನು ಬಂಧಿಸಿದ್ದರು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಟರ್ಕಿ ಮೂಲದ ಬಯೋನ್ಯಾಜ್, ಗೋವಿಂದರಾಜು, ಪ್ರಕಾಶ್ ಹಾಗೂ ಅಕ್ಷಯ್‍ನನ್ನು ಬಂಧಿಸಿದ್ದಾರೆ.

ಹದಿನೈದು ವರ್ಷಗಳ ಹಿಂದೆಯೇ ಟರ್ಕಿಯಿಂದ ಬಂದಿದ್ದ ಆರೋಪಿ ಮಹಿಳೆ ಬಯೋನ್ಯಾಜ್, ರೋಹಿತ್ ಸ್ವಾಮಿಗೌಡ ಎಂಬಾತನನ್ನು ಮದುವೆಯಾಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಳು. ಕೆಲವು ವರ್ಷಗಳ ಹಿಂದೆ ಪತಿ ತೀರಿ ಹೋಗಿದ್ದ. ಬಳಿಕ ದೇಶ, ವಿದೇಶ ಮೂಲದ ಯುವತಿಯರನ್ನು ಬಳಸಿಕೊಂಡು ನಿರಂತರವಾಗಿ ವೇಶ್ಯಾವಾಟಿಕೆ ದಂಧೆ ನಡೆಸಿಕೊಂಡು ಬರುತ್ತಿದ್ದಳು. ಅಲ್ಲದೇ, ಜೈಪುರ, ಚೆನ್ನೈ, ಮೈಸೂರು, ದಿಲ್ಲಿ, ಉದಯಪುರ, ಮುಂಬೈ ನಗರಗಳಲ್ಲಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಮಧ್ಯವರ್ತಿಗಳ ಜೊತೆ ಸಂಪರ್ಕದಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ದಂಧೆ ನಡೆಸುತ್ತಿದ್ದಳು ಎಂದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.

ಸದ್ಯ ಆರೋಪಿಗಳ ವಶದಲ್ಲಿದ್ದ ಉಝ್ಬೇಕಿಸ್ತಾನ್, ಕಝಕಿಸ್ತಾನ ಮೂಲದ ಆರು ಜನ, ಬಾಂಗ್ಲಾದೇಶ ಮೂಲದ ಓರ್ವ ಹಾಗೂ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮೂಲದ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News