ಬೆಂಗಳೂರು | ರೇವ್ ಪಾರ್ಟಿ ಪ್ರಕರಣ : ತೆಲುಗು ನಟಿ ಸೇರಿ 8 ಮಂದಿಗೆ ಸಿಸಿಬಿ ನೋಟಿಸ್

Update: 2024-05-25 15:24 GMT

ಬೆಂಗಳೂರು : ಜಿ.ಆರ್.ಫಾರ್ಮ್ ಹೌಸ್‍ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಪೈಕಿ ತೆಲುಗು ಚಿತ್ರರಂಗದ ಪೋಷಕ ನಟಿ ಹೇಮಾ ಸೇರಿದಂತೆ 8 ಜನರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.

ಮೇ 27ರಂದು ಪ್ರಕರಣದ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ ಸೂಚಿಸಲಾಗಿದೆ ಎಂದು ಸಿಸಿಬಿ ಮೂಲಗಳು ಮಾಹಿತಿ ನೀಡಿವೆ. ಮೇ 20ರಂದು ರಾತ್ರಿ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಜಿ.ಆರ್.ಫಾರ್ಮ್ ಹೌಸ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಸ್ಥಳದಲ್ಲಿ ಕೆಲವು ಮಾದಕ ಪದಾರ್ಥಗಳು ಆಂಧ್ರಪ್ರದೇಶದ ಶಾಸಕರೊಬ್ಬರ ಪಾಸ್ ಇರುವ ಕಾರು ಕೂಡ ಪತ್ತೆಯಾಗಿತ್ತು. ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಜನರನ್ನು ಪೊಲೀಸರು ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆಗೊಳಪಡಿಸಿದ್ದರು. ಅಲ್ಲದೆ, ಪಾರ್ಟಿ ಆಯೋಜಿಸಿದ್ದ ಆರೋಪದಡಿ ವಾಸು, ವೈ.ಎಂ.ಅರುಣ್ ಕುಮಾರ್, ನಾಗಬಾಬು, ರಣಧೀರ್ ಬಾಬು, ಮುಹಮ್ಮದ್ ಅಬೂಬಕ್ಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ವೈದ್ಯಕೀಯ ತಪಾಸಣೆಗೊಳಪಟ್ಟಿದ್ದವರ ಪೈಕಿ 59 ಪುರುಷರು ಹಾಗೂ 27 ಮಹಿಳೆಯರ ಸಹಿತ ಒಟ್ಟು 86 ಜನ ಮಾದಕ ಪದಾರ್ಥ ಸೇವಿಸಿರುವುದು ವರದಿಯಲ್ಲಿ ದೃಢಪಟ್ಟಿತ್ತು. ಅವರಲ್ಲಿ 8 ಜನ ಆರೋಪಿಗಳಿಗೆ ಸದ್ಯ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಐವರ ಬ್ಯಾಂಕ್ ಖಾತೆಗಳು ಸೀಜ್: ಈ ಪ್ರಕರಣದಲ್ಲಿ ಬಂಧಿತರಾಗಿರುವ 5 ಮಂದಿಯ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ರೂ. ಹಣ ಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಅಧಿಕಾರಿಗಳು ಐದು ಮಂದಿಯ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿಸಲು ಮುಂದಾಗಿರುವುದಾಗಿ ತಿಳಿದುಬಂದಿದೆ. ಈ ರೀತಿಯ ರೇವ್ ಪಾರ್ಟಿಗಳನ್ನು ಎಲ್ಲೆಲ್ಲಿ ಮಾಡಿಸಲಾಗಿದೆ, ಯಾರೆಲ್ಲಾ ಭಾಗಿಯಾಗಿದ್ದರು, ಎಷ್ಟೆಷ್ಟು ಹಣ ಸಂಗ್ರಹಿಸಲಾಗಿತ್ತು, ಪಾರ್ಟಿಗೆ ಎಲ್ಲಿಂದ ಮಾದಕ ವಸ್ತು ಸರಬರಾಜು ಆಗುತ್ತಿತ್ತು ಎಂಬೆಲ್ಲಾ ಮಾಹಿತಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಈ ಐದು ಮಂದಿಯ ಮೊಬೈಲ್‍ಗಳ ಮಿರರ್ ಇಮೇಜ್ ಮಾಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಆರೋಪಿಗೆ ಆಂಧ್ರ ರಾಜಕಾರಣಿಗಳ ನಂಟು: ಬೆಂಗಳೂರಿನ ರೇವ್ ಪಾರ್ಟಿ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬಂಧಿತ ಎ-2 ಆರೋಪಿಯಾಗಿರುವ ಅರುಣ್‍ಕುಮಾರ್, ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್‍ರೆಡ್ಡಿ ಹಾಗೂ ರಾಯಚೋಟಿ ಶಾಸಕ ಶ್ರೀಕಾಂತ್ ರೆಡ್ಡಿ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆರೋಪಿ ಅರುಣ್ ಕುಮಾರ್‍ಗೆ ಆಂದ್ರದ ವೈಎಸ್‍ಆರ್‍ಸಿಪಿ ಪಕ್ಷದ ಪ್ರಮುಖ ನಾಯಕರ ಜೊತೆ ನಂಟು ಹೊಂದಿರುವುದಾಗಿ ಬೆಳಕಿಗೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News