ಬೆಂಗಳೂರು | ರೇವ್ ಪಾರ್ಟಿ ಪ್ರಕರಣ : ನಟಿ ಹೇಮಾಗೆ ಎರಡನೇ ಬಾರಿ ನೋಟಿಸ್
ಬೆಂಗಳೂರು : ನಗರದ ಹೊರವಲಯದ ಜಿ.ಆರ್.ಫಾರ್ಮ್ ಹೌಸ್‍ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಪೋಷಕ ನಟಿ ಹೇಮಾಗೆ ಎರಡನೇ ಬಾರಿ ಸಿಸಿಬಿ ಪೊಲೀಸರು ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.
ಪ್ರಕರಣದ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ನಟಿ ಹೇಮಾ ಸೇರಿದಂತೆ 8 ಜನರಿಗೆ ಮೇ 25ರಂದು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಅದರ ಪ್ರಕಾರ ಮೇ 27ರಂದು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕಿತ್ತು. ಆದರೆ, ಅನಾರೋಗ್ಯದ ಕಾರಣ ನೀಡಿದ್ದ ನಟಿ ಹೇಮಾ, ವಿಚಾರಣೆಗೆ ಹಾಜರಾಗಲು ಒಂದು ವಾರ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು.
ಸದ್ಯ ಮತ್ತೊಂದು ನೋಟಿಸ್ ರವಾನಿಸಿರುವ ಸಿಸಿಬಿ ಪೊಲೀಸರು ಜೂ.1ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾಗೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಮೇ 20ರಂದು ರಾತ್ರಿ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಜಿ.ಆರ್.ಫಾರ್ಮ್ ಹೌಸ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿ ಕೆಲವು ಮಾದಕ ಪದಾರ್ಥಗಳು, ಆಂಧ್ರಪ್ರದೇಶದ ಶಾಸಕರೊಬ್ಬರ ಪಾಸ್ ಇರುವ ಕಾರು ಕೂಡ ಪತ್ತೆಯಾಗಿತ್ತು.
ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಜನರನ್ನು ಪೊಲೀಸರು ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆಗೊಳಪಡಿಸಿದ್ದರು. ಅಲ್ಲದೆ ಪಾರ್ಟಿ ಆಯೋಜಿಸಿದ್ದ ಆರೋಪದಡಿ ವಾಸು, ವೈ.ಎಂ.ಅರುಣ್ ಕುಮಾರ್, ನಾಗಬಾಬು, ರಣಧೀರ್ ಬಾಬು, ಮುಹಮ್ಮದ್ ಅಬೂಬಕ್ಕರ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ವೈದ್ಯಕೀಯ ತಪಾಸಣೆಗೊಳಪಟ್ಟಿದ್ದವರ ಪೈಕಿ 59 ಪುರುಷರು ಹಾಗೂ 27 ಮಹಿಳೆಯರ ಸಹಿತ ಒಟ್ಟು 86 ಜನ ಮಾದಕ ಪದಾರ್ಥ ಸೇವಿಸಿರುವುದು ವರದಿಯಲ್ಲಿ ದೃಢಪಟ್ಟಿತ್ತು.