ಬೆಂಗಳೂರು | ರೇವ್‌ ಪಾರ್ಟಿ ಪ್ರಕರಣ : ತೆಲುಗು ನಟಿ ಹೇಮಾ ಬಂಧನ

Update: 2024-06-03 15:02 GMT

 Photo: Kolla Hema/Instagram)

ಬೆಂಗಳೂರು: ಇತ್ತೀಚಿಗೆ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆರೋಪದ ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಅವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಸೋಮವಾರ ನಟಿ ಹೇಮಾ ಅನ್ನು ಬಂಧಿಸಲಾಗಿದ್ದು, ಈಕೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ತನ್ನ ಹೆಸರು ಕೃಷ್ಣವೇಣಿ ಎಂದು ಸುಳ್ಳು ಹೇಳಿಕೆ ಉಲ್ಲೇಖಿಸಿದ್ದರು. ಜತೆಗೆ ರೇವ್ ಪಾರ್ಟಿಯಲ್ಲಿ ಮಾದಕ ವಸ್ತುಗಳ ಕುರಿತು ಅರಿವಿತ್ತು. ವಿಡಿಯೊ ನೀಡುವ ಮೂಲಕ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡಿರುವ ಆರೋಪದಡಿ ಬಂಧಿಸಲಾಗಿದೆ ಎಂದು ಸಿಸಿಬಿ ದೃಢಪಡಿಸಿದೆ.

ಇಲ್ಲಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಎಂ.ಫಾರ್ಮ್ ಹೌಸ್‍ನಲ್ಲಿ ಹುಟ್ಟುಹಬ್ಬದ ಹೆಸರಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಆಂಧ್ರ ಮೂಲದ ನಟಿಯರು, ಉದ್ಯಮಿಗಳು ಸೇರಿದಂತೆ ಅನೇಕರಿದ್ದರು ಎನ್ನಲಾಗಿದೆ.

ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಿಸಿಬಿ, 6 ಮಂದಿಯನ್ನು ಬಂಧಿಸಿತ್ತು. ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಪೈಕಿ 86 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿತ್ತು. ಹೇಮಾ ಸಹ ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿತ್ತು. ಆದರೆ ತಾನು ಪಾರ್ಟಿಯಲ್ಲಿ ಇರಲಿಲ್ಲ ಎಂದು ನಟಿ ಹೇಮಾ ವಿಡಿಯೊ ಮಾಡಿ ಹೈಡ್ರಾಮಾ ಮಾಡಿದ್ದರು. ಬಂಧಿತರಾಗಿದ್ದ ವಾಸು, ಅರುಣ್, ಸಿದ್ದಿಕ್, ರಣದೀರ್ ಹಾಗೂ ರಾಜ್ ಭಾವ ಅವರ ವಿಚಾರಣೆ ವೇಳೆ ಹೇಮಾ ಸಹ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿಷಯ ಬೆಳಕಿಗೆ ಬಂದಿತ್ತು.

ಈ ಮೊದಲು ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಒಂದು ವಾರ ಸಮಯಾವಕಾಶ ನೀಡುವಂತೆ ಹೇಮಾ, ಸಿಸಿಬಿ ಪೊಲೀಸರಲ್ಲಿ ಮನವಿ ಮಾಡಿದ್ದರು. ಹೀಗಾಗಿ ಜೂ.1ರಂದು ಹಾಜರಾಗುವಂತೆ ಎರಡನೆ ನೋಟಿಸ್ ಜಾರಿ ಮಾಡಲಾಗಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮೂರನೆ ನೋಟಿಸ್ ನೀಡಿದ ಪರಿಣಾಮ ಸೋಮವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಆ ಬಳಿಕ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ನಟಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದರು.

ಇನ್ನೂ, ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ. ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿಯ ಪಾತ್ರ ಪ್ರಮುಖವಾಗಿತ್ತು. ಅಲ್ಲದೆ, ಡ್ರಗ್ಸ್ ಸೇವಿಸಿಲ್ಲ ಎಂದು ವಿಡಿಯೊ ಮಾಡಿ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News