ಬಜೆಟ್‍ನಲ್ಲಿ ಗ್ರಂಥಾಲಯ ಇಲಾಖೆಯ ಕಡೆಗಣನೆ : ಪ್ರೊ.ಬರಗೂರು ರಾಮಚಂದ್ರಪ್ಪ

Update: 2025-02-08 21:27 IST
ಬಜೆಟ್‍ನಲ್ಲಿ ಗ್ರಂಥಾಲಯ ಇಲಾಖೆಯ ಕಡೆಗಣನೆ : ಪ್ರೊ.ಬರಗೂರು ರಾಮಚಂದ್ರಪ್ಪ
  • whatsapp icon

ಬೆಂಗಳೂರು : ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇಲಾಖೆಗಳಲ್ಲಿ ಗ್ರಂಥಾಲಯ ಇಲಾಖೆಯೂ ಒಂದಾಗಿದ್ದು, ಬಜೆಟ್‍ನಲ್ಲಿ ಗ್ರಂಥಾಲಯ ಇಲಾಖೆಗೆ ಅನುದಾನ ನೀಡದೆ ಕಡೆಗಣಿಸಲಾಗಿದೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಶನಿವಾರ ನಗರದ ಗಾಂಧಿಭವನದಲ್ಲಿ ನಡೆದ ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ-75 ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2020ರಲ್ಲಿ ಗ್ರಂಥಾಲಯ ಇಲಾಖೆಗೆ ಆಯ್ಕೆ ಮಾಡಿದ ಪುಸ್ತಕಗಳಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಹಣ ಕೊಟ್ಟಿಲ್ಲ. ಗ್ರಂಥಾಲಯ ಇಲಾಖೆಗೆ ದೊಡ್ಡ ಕಾಯಕಲ್ಪ ಮಾಡಬೇಕಿದೆ ಎಂದರು.

2021ರ ಪುಸ್ತಕಗಳು ಗ್ರಂಥಾಲಯ ಇಲಾಖೆಗೆ ಆಯ್ಕೆಯಾಗಿದ್ದರೂ ಸರಕಾರ ಹಣ ನೀಡಿಲ್ಲ. ಪುಸ್ತಕಗಳ ಸಗಟು ಖರೀದಿಯನ್ನು ಗ್ರಂಥಾಲಯ ಇಲಾಖೆ ಮಾಡುತ್ತದೆ. ಆದರೆ ಬಜೆಟ್‍ನಲ್ಲಿ ಗ್ರಂಥಾಲಯ ಇಲಾಖೆಗೆ ಅನುದಾನವನ್ನೇ ನೀಡಿಲ್ಲ. ಒಮ್ಮೆ ಮಾತ್ರ 10 ಕೋಟಿ ರೂ. ಗ್ರಂಥಾಲಯ ಇಲಾಖೆಗೆ ನೀಡಲಾಗಿತ್ತು. ಈಗ ಇಲಾಖೆಯು ಬೇರೆ ಆದಾಯದ ಮೂಲವನ್ನು ನೋಡುವಂತಾಗಿದೆ. ಹೀಗಾದರೆ ಪುಸ್ತಕ ಸಂಸ್ಕೃತಿ ಉಳಿಸುವ ಕೆಲಸವಾಗುವುದು ಹೇಗೆ? ಎಂದು ಪ್ರೊ.ಬರಗೂರು ಬೇಸರ ವ್ಯಕ್ತಪಡಿಸಿದರು.

ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಕರೀಗೌಡ ಬೀಚನಹಳ್ಳಿ ಸಂಪಾದಿಸಿರುವ ಅಮೃತ ಕಥಾನಕ ಗ್ರಂಥವು 75 ಕಿರುಕತೆಗಳನ್ನು ಒಳಗೊಂಡಿದೆ. ಇದು ವಿವಿಧ ಕಾಲಘಟ್ಟ ಪ್ರತಿನಿಧಿಸುವ ಕಿರು ಕಥೆಗಳನ್ನು ಒಳಗೊಂಡಿದೆ. ಇದೊಂದು ಉಪಯುಕ್ತ ಪುಸ್ತಕವಾಗಿದ್ದು, ಕರೀಗೌಡ ಬೀಚನಹಳ್ಳಿಯವರು ಸಾರ್ಥಕ ಕೆಲಸ ಮಾಡಿದ್ದಾರೆ ಎಂದು ಪ್ರೊ.ಬರಗೂರು ಮೆಚ್ಚುಗೆ ಸೂಚಿಸಿದರು.

ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಪುಸ್ತಕವನ್ನು ಕೇವಲ ಉದ್ಯಮವನ್ನಾಗಿ ಮಾತ್ರ ನೋಡದೆ ಅದನ್ನು ಸಂಸ್ಕೃತಿಯ ಭಾಗವಾಗಿ ನೋಡುವಂತೆ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿ ಪುಸ್ತಕದ ಗುಣಮಟ್ಟ, ಉತ್ಪಾದನೆಯ ಮೌಲ್ಯ ಹೆಚ್ಚುವಂತೆ ಮಾಡಬೇಕು ಎಂದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ ಮಾತನಾಡಿ, ಗ್ರಂಥಾಲಯಗಳಲ್ಲಿ ಹೊಸ ಪುಸ್ತಕಗಳನ್ನು ಸೇರ್ಪಡೆ ಮಾಡುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಪುಸ್ತಕ ಖರೀದಿಯಲ್ಲಿ ಆಗುತ್ತಿರುವ ವಿಳಂಬ. ಇದರೊಂದಿಗೆ ಪುಸ್ತಕ ಪ್ರಕಾಶನ ರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳತ್ತ ಸರಕಾರ ಗಮನ ಹರಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಡಾ.ಕರೀಗೌಡ ಬೀಚನಹಳ್ಳಿ, ಹಿರಿಯ ಸಾಹಿತಿ, ಪ್ರಕಾಶಕ, ನಟ ನಿಡಸಾಲೆ ಪುಟ್ಟಸ್ವಾಮಯ್ಯ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News