ಬೆಳಗಾವಿ ಅಧಿವೇಶನ | ಉತ್ತರ ಕರ್ನಾಟಕದ ಶಾಲಾ ಶಿಕ್ಷಣದ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಲು ನಿರಂಜನಾರಾಧ್ಯ ವಿ.ಪಿ. ಒತ್ತಾಯ
ಬೆಂಗಳೂರು : ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಶಾಲಾ ಶಿಕ್ಷಣದ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.
ಬುಧವಾರ ಪ್ರಕಟನೆ ಹೊರಡಿಸಿರುವ ಅವರು, ಈ ಭಾಗದಲ್ಲಿ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಜೊತೆಗೆ ಶಿಕ್ಷಕರ ನೇಮಕಾತಿ, ವರ್ಗಾವಣೆ, ಬಡ್ತಿ ಮತ್ತು ಸೇವಾಭದ್ರತೆ ವಿಷಯದಲ್ಲಿ ಸಾಕಷ್ಟು ನ್ಯೂನತೆಗಳ ಗೊಂದಲದಿಂದಾಗಿ, ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಕಲಿಕೆ ನೆನೆಗುದಿಗೆ ಬಿದ್ದಿದೆ ಎಂದಿದ್ದಾರೆ.
ಸುವರ್ಣಸೌಧ ನಿರ್ಮಾಣವಾಗಿ ಅಧಿವೇಶನಗಳು ನಡೆಯಲು ಪ್ರಾರಂಭವಾದಾಗ, ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಿತ್ತು. ಈಗ ಅದು ಭ್ರಮರನಿರಸನವಾಗುತ್ತಿದೆ. ಈಗ ನಡೆಯುತ್ತಿರುವ ಅಧಿವೇಶನವು ಗೊಂದಲದ ಗೂಡಾಗಿದ್ದು, ಪರಸ್ಪರ ಆರೋಪ -ಪ್ರತ್ಯಾರೋಪಗಳ ವೇದಿಕೆಯಾಗಿದೆ. ಒಂದು ರಾಜಕೀಯ ವಿಷಯವನ್ನು ಕೈಗೆತ್ತಿಕೊಂಡು ಉಳಿದ ಜ್ವಲಂತ ಸಮಸ್ಯೆಗಳನ್ನು ಮೂಲೆಗುಂಪು ಮಾಡುವ ಕೆಲಸ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶಿಕ್ಷಣ ಇಲಾಖೆಯ 2024-25ನೆ ಸಾಲಿನ ಅಂಕಿ-ಅಂಶಗಳ ಅನ್ವಯ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ 1,87,993 ಶಿಕ್ಷಕರ ಹುದ್ದೆಗಳು ಮುಂಜೂರಾದರೆ, 1,44,747 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸರಿ ಸುಮಾರು 43,246 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಖಾಲಿ ಇರುವ ಹುದ್ದೆಗಳಲ್ಲಿ ಸುಮಾರು 27,376 ಹುದ್ದೆಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿವೆ ಎಂದು ಅವರು ಹೇಳಿದ್ದಾರೆ.
ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳುವ ಬದಲು ರಾಜ್ಯ ಸರಕಾರ ಅತಿಥಿ ಶಿಕ್ಷಕರ ನೇಮಕಾತಿಯ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಅನಿಶ್ಚಿತತೆಗೆ ದೂಡಿ ದುರ್ಬಲಗೊಳಿಸಿದೆ. 2024-25 ನೆ ಸಾಲಿನಲ್ಲಿ ರಾಜ್ಯದಲ್ಲಿ 34,192 ಅತಿಥಿ ಶಿಕ್ಷಕರು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರಿಗೆ ಯಾವುದೇ ರೀತಿಯ ಸೇವಾಭದ್ರತೆಯಾಗಲಿ ಅಥವಾ ಕನಿಷ್ಠ ವೇತನವಾಗಲಿ ಸಿಗುತ್ತಿಲ್ಲ. ಒಮ್ಮೊಮ್ಮೆ 4-5 ತಿಂಗಳಾದರೂ, ಅವರಿಗೆ ಸಿಗಬೇಕಾದ ಗೌರವಧನವೂ ಸಿಕ್ಕಿರುವುದಿಲ್ಲ ಎಂದು ಅವರು ಬೇಸರವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಕರ್ನಾಟಕದಲ್ಲಿ, ಅದರಲ್ಲೂ ವಿಷೇಶವಾಗಿ ಉತ್ತರ ಕರ್ನಾಟಕದಲ್ಲಿ ಶೂನ್ಯ ಶಿಕ್ಷಕರ ಶಾಲೆ, ಏಕೋಪಾಧ್ಯ ಶಾಲೆ ಮತ್ತು ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರಿಲ್ಲದಿರುವುದು ಗುಣಮಟ್ಟದ ಶಿಕ್ಷಣದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಿದೆ. ಈ ಎಲ್ಲ ಕಾರಣಗಳಿಂದ ಸರಕಾರವು ಈ ವಿಷಯಗಳನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿ ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಬೇಕಿದೆ. ಇಲ್ಲವಾದಲ್ಲಿ ಸುವರ್ಣ ಸೌಧ ನಿರ್ಮಿಸಿ ಉತ್ತರ ಕರ್ನಾಟಕದಲ್ಲಿ ವಿಧಾನಸಭಾ ಅಧಿವೇಶನ ನಡೆಸುವ ಸಂಪ್ರದಾಯ ಅರ್ಥಕಳೆದುಕೊಳ್ಳುತ್ತದೆ ಎಂದು ನಿರಂಜನಾರಾಧ್ಯ.ವಿ.ಪಿ. ಹೇಳಿದ್ದಾರೆ.