×
Ad

ಬೆಂಗಳೂರು | ಸೋನಿಯಾ, ರಾಹುಲ್ ವಿರುದ್ಧ ಈಡಿ ಚಾರ್ಜ್‍ಶೀಟ್: ಈಡಿ ಕಚೇರಿಯ ಎದುರು ಕಾಂಗ್ರೆಸ್ ಪ್ರತಿಭಟನೆ

Update: 2025-04-16 20:28 IST


ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಈಡಿ) ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ವಿಲ್ಸನ್ ಗಾರ್ಡನ್‍ನಲ್ಲಿರುವ ಈಡಿ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ವಿರೋಧ ಪಕ್ಷದ ನಾಯಕರ ವಿರುದ್ಧ ದ್ವೇಷ ಸಾಧಿಸಲು ಮೋದಿ ನೇತೃತ್ವದ ಕೇಂದ್ರ ಸರಕಾರ ಈ.ಡಿ.ಯನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬಳಸಿಕೊಂಡಿದೆ. ಇದೊಂದು ಕೇಂದ್ರದ ಸುಳ್ಳು ಆರೋಪ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆ ದೇಶದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಕೇಂದ್ರ ಸರಕಾರ ನೈತಿಕವಾಗಿ ದಿವಾಳಿಯಾಗಿದೆ ಎಂದು ಎಸ್.ಮನೋಹರ್ ಆರೋಪಿಸಿದರು.

ಇದೇ ವೇಳೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದು, ಅನಂತರ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಮತ್ತು ಹನುಮಂತರಾಯಪ್ಪ, ಮಂಜುನಾಥಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News