ಬೆಂಗಳೂರು: ಮೊಬೈಲ್‍ಗಾಗಿ ಮೆಟ್ರೋ ಹಳಿಗೆ ಜಿಗಿದ ಮಹಿಳೆ
ಬೆಂಗಳೂರು: ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು 750ಕೆವಿ ವೋಲ್ಟ್ ವಿದ್ಯುತ್ ಹರಿಯುವ ಮೆಟ್ರೋ ರೈಲಿನ ಹಳಿಗೆ ಮಹಿಳೆಯೊಬ್ಬರು ಜಿಗಿದ ಘಟನೆ ಇಲ್ಲಿನ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ವರದಿಯಾಗಿದೆ.
ಡಿ.1ರಂದು ಈ ಘಟನೆ ನಡೆದಿದ್ದು, ಇಂದಿರಾನಗರ ಮೆಟ್ರೋ ನಿಲ್ದಾಣದ ಪ್ಲಾಟ್‍ಫಾರ್ಮ್-1ರಲ್ಲಿ ಮಹಿಳೆಯೊಬ್ಬರು ಮೆಟ್ರೋ ರೈಲಿಗಾಗಿ ಕಾದು ನಿಂತಿದ್ದರು. ಈ ವೇಳೆ ಆಕಸ್ಮಿಕವಾಗಿ ಅವರ ಮೊಬೈಲ್ ರೈಲು ಹಳಿಗಳ ಮೇಲೆ ಬಿದ್ದಿದೆ. ಆಗ ತಕ್ಷಣವೇ ಮೊಬೈಲ್ ಎತ್ತಿಕೊಳ್ಳಲು ಮಹಿಳೆ ಹಳಿಗಳ ಮೇಲೆ ಜಿಗಿದಿದ್ದಾರೆ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣವೇ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದಾರೆ. ಬಳಿಕ ಕೂಡಲೇ ಆಕೆಯನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಇನ್ನು ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಕಾರಣ ಪರ್ಪಲ್ ಲೈನ್‍ನಲ್ಲಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಇದೊಂದು ವಿಚಿತ್ರ ಘಟನೆ. 750ಕೆವಿ ವೋಲ್ಟ್ ವಿದ್ಯುತ್ ಹರಿಯುವ ಹಳಿಗಳಲ್ಲಿ ಮೆಟ್ರೋ ರೈಲು ಸಂಚರಿಸುತ್ತದೆ. ಮಹಿಳೆಯೊಬ್ಬರು ಮೊಬೈಲ್ ಅನ್ನು ಹಳಿಯ ಮೇಲೆ ಬೀಳಿಸಿ, ನಂತರ ಆ ಮಹಿಳೆ ಕೆಳಗೆ ಜಿಗಿಯುವುದನ್ನು ಗಮನಿಸಿದ ನಮ್ಮ ಸಿಬ್ಬಂದಿಯ ಸಮಯ ಪ್ರಜ್ಞೆ ಮೆರೆದು ವಿದ್ಯುತ್ ಸರಬರಾಜು ಕಡಿತಗೊಳಿಸಿದ್ದಾರೆ. ಅವರ ಚುರುಕಾದ ಕ್ರಮವೇ ಆಕೆಯ ಜೀವ ಉಳಿಸಿದೆ. ಇದು ಅತ್ಯಂತ ಅಪಾಯಕಾರಿಯಾದ ಕಾರಣ ರೈಲಿನ ಟ್ರ್ಯಾಕ್‍ಗಳ ಬಳಿ ಎಲ್ಲೂ ಯಾರನ್ನೂ ಅನುಮತಿಸಲಾಗುವುದಿಲ್ಲ. ಈ ಅನಿರೀಕ್ಷಿತ ಘಟನೆಯಿಂದ ಸುಮಾರು 15 ನಿಮಿಷಗಳ ಕಾಲ ಮೆಟ್ರೋ ಸಂಚಾರ ನಿಲ್ಲಿಸಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ತೊಂದರೆಯುಂಟಾಗಿದ್ದು, ಇದಕ್ಕೆ ವಿಷಾಧಿಸುತ್ತೇವೆ ಎಂದರು.