ಬೆಂಗಳೂರು | ಮೆಟ್ರೊ ಆವರಣ, ರೈಲುಗಳ ಒಳಗೆ ತಂಬಾಕು ಉತ್ಪನ್ನ ಸೇವಿಸಿದರೆ ದಂಡ

Update: 2025-04-23 21:29 IST
ಬೆಂಗಳೂರು | ಮೆಟ್ರೊ ಆವರಣ, ರೈಲುಗಳ ಒಳಗೆ ತಂಬಾಕು ಉತ್ಪನ್ನ ಸೇವಿಸಿದರೆ ದಂಡ
  • whatsapp icon

ಬೆಂಗಳೂರು : ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಕರು ಗುಟ್ಕಾ ಮತ್ತು ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳನ್ನು ಸೇವಿಸಿದರೆ ದಂಡ ವಿಧಿಸಲು ಬಿಎಂಆರ್‍ಸಿಎಲ್ ತೀರ್ಮಾನಿಸಿದೆ.

ಈ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗುತ್ತಿದ್ದು, ಸಮಸ್ಯೆಯ ಪರಿಹಾರಕ್ಕಾಗಿ ಮತ್ತು ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸ ಹಾಕುವುದನ್ನು ತಪ್ಪಿಸುವುದಕ್ಕಾಗಿ, ಜನದಟ್ಟಣೆ ಇಲ್ಲದ ಸಮಯಗಳಲ್ಲಿ ಗಸ್ತು ತಿರುಗುವುದನ್ನು ಬಲಪಡಿಸಲು ಬಿಎಂಆರ್‍ಸಿಎಲ್ ನಿರ್ಧರಿಸಿದೆ.

ಎಲ್ಲಾ ರೈಲುಗಳು ಮತ್ತು ಮೆಟ್ರೊ ನಿಲ್ದಾಣಗಳಲ್ಲಿ ಕಣಾವಲು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ತಪ್ಪಿತಸ್ಥ ಪ್ರಯಾಣಿಕರಿಗೆ ಬಿಎಂಆರ್‍ಸಿಎಲ್ ನಿಯಮಗಳ ಪ್ರಕಾರ ದಂಡ ವಿಧಿಸಲಾಗುವುದು. ಅಂತಹ ವಸ್ತುಗಳನ್ನು ಲೋಹ ಶೋಧಕಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಅನುಮಾನ ಬಂದ ಜಾಗಗಳಲ್ಲಿ ಆಗಾಗ್ಗೆ ತಪಾಸಣೆಗಳನ್ನು ಜಾರಿಗೆ ತರಲು ಬಿಎಂಆರ್‍ಸಿಎಲ್ ನಿರ್ಧರಿಸಿದೆ.

ಅಂತಹ ಪ್ರಯಾಣಿಕರನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಲು ಜೊತೆಗೆ ಜನರೊಂದಿಗೆ ಈ ಕುರಿತು ಸಂವೇದನಾಶೀಲ ನಡವಳಿಕೆ ಹೊಂದಿರುವುದರ ಬಗ್ಗೆ ಪ್ಲಾಟ್‍ಫಾರ್ಮ್ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಪ್ರಯಾಣಿಕರ ನಡವಳಿಕೆಯನ್ನು ಗಮನಿಸುವುದರ ಜೊತೆಗೆ ಯಾವುದೇ ಉಲ್ಲಂಘನೆಗಳನ್ನು ಗಮನಿಸಿದ ಕೂಡಲೇ ಸಂಬಧಿಸಿದ ಪ್ಲಾಟ್‍ಫಾರ್ಮ್ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲು ಕೇಂದ್ರ ಭದ್ರತಾ ಕಣ್ಣಾವಲು ಕೊಠಡಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಹೆಚ್ಚುವರಿಯಾಗಿ, ಎಲ್ಲ ಮೆಟ್ರೋ ಪ್ರಯಾಣಿಕರಿಗೆ ಸ್ವಚ್ಛ ಮತ್ತು ಹೆಚ್ಚು ಆಹ್ಲಾದಪೂರ್ಣ ಪ್ರಯಾಣಾನುಭವದ ಖಾತ್ರಿಮಾಡಿಕೊಳ್ಳಲು, ಮೆಟ್ರೊ ಆವರಣದಲ್ಲಿ ಅಗಿಯಬಹುದಾದ ತಂಬಾಕು ಆಧರಿತ ಉತ್ಪನ್ನಗಳನ್ನು ಬಳಸದಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ವ್ಯಾಪಕ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸುವುದರ ಬಗ್ಗೆ ಬಿಎಂಆರ್‍ಸಿಎಲ್ ಯೋಜನೆ ಕೈಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News