ಬೆಂಗಳೂರು: ಬ್ಯಾರಿ ಅಕಾಡೆಮಿ ಅಧ್ಯಕ್ಷ-ಸದಸ್ಯರ ಪದಗ್ರಹಣ; ‘ಪಿರ್ಸಪ್ಪಾಡ್‌’ ಸಾಂಸ್ಕೃತಿಕ ಸಂಭ್ರಮ

Update: 2024-07-20 08:25 GMT


Delete Edit

ಬೆಂಗಳೂರು: ಮಾತೃಭಾಷೆ, ಸಾಹಿತ್ಯಗಳು ಉಳಿದು ಬೆಳೆಯಬೇಕಾದರೆ ಮುಂದಿನ ಪೀಳಿಗೆಗೆ ವರ್ಗಾಯಿಸುವ ಅವಶ್ಯಕತೆ ಇದೆ. ಹಾಗಾಗಿ, ಅದನ್ನು ವರ್ಗಾವಣೆ ಮಾಡುವ ಜವಾಬ್ದಾರಿ ಪೋಷಕರದ್ದು. ಪೋಷಕರು ಮನೆಯಿಂದಲೇ ತಮ್ಮ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಸಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅಭಿಪ್ರಾಯಿಸಿದರು.

ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನಲ್ಲಿರುವ ಬ್ಯಾರಿ ಸೌಹಾರ್ದ ಭವನದಲ್ಲಿ ಶುಕ್ರವಾರ ಸಂಜೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಅಕಾಡೆಮಿ ಅಧ್ಯಕ್ಷ-ಸದಸ್ಯರ ಪದಗ್ರಹಣ; ‘ಪಿರ್ಸಪ್ಪಾಡ್‌’ ಬ್ಯಾರಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಾಹಿತ್ಯಕ್ಕೆ ತನ್ನದೇ ಆದ ಮಹತ್ವವಿದೆ. ಸಮಾಜದಲ್ಲಿ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಸಾಹಿತ್ಯದ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಹಾಗಾಗಿ, ಮಕ್ಕಳಲ್ಲಿ ಪೋಷಕರು ಸಾಹಿತ್ಯಾಸಕ್ತಿ ಬೆಳೆಸಬೇಕಾದ ಅವಶ್ಯಕತೆ ಇದೆ. ವಾರಾಂತ್ಯದಲ್ಲಿ ಮಾಲ್‌‌ಗಳಿಗೆ ಭೇಟಿ ನೀಡುವಂತೆ ಪುಸ್ತಕ ಮೇಳಗಳು ನಡೆಯುತ್ತಿದ್ದಾಗ ತಮ್ಮ ಮಕ್ಕಳನ್ನು ಕೂಡ ಪೋಷಕರು ಕರೆದುಕೊಂಡು ಹೋಗಬೇಕು. ಆಗ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಒಲವು ಮೂಡಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಬ್ಯಾರಿ ಸಮುದಾಯದ ಮಂದಿ ಬಹಳಷ್ಟು ಸ್ವಾಭಿಮಾನಿಗಳು. ಎಷ್ಟೇ ಕಷ್ಟವಿದ್ದರೂ ಕೂಡ ದುಡಿದು ತಿನ್ನುವ ಮೂಲಕ ಸ್ವಾಭಿಮಾನದ ಜೀವನ ಸಾಗಿಸುವವರು‌. ಬ್ಯಾರಿ ಸಮುದಾಯದ ಯುವ ಪೀಳಿಗೆಯವರು ಸಾಧನೆಗಳ ಮೆಟ್ಟಿಲು ಹತ್ತಬೇಕು. ಆ ಮೂಲಕ ಗೌರವ ಪಡೆಯುವಂತಹ ವ್ಯಕ್ತಿತ್ವವನ್ನು ಬೆಳೆಸಬೇಕು. ಎಷ್ಟೇ ಎತ್ತರಕ್ಕೆ ಏರಿದರೂ ನಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಸ್ಪೀಕರ್ ಯು ಟಿ ಖಾದರ್ ಸಲಹೆ ನೀಡಿದರು.

ಮಂಗಳೂರಿನಲ್ಲಿ ಬ್ಯಾರಿ ಸಮುದಾಯದ ಹಿರಿಯರು ನಡೆಸುತ್ತಿದ್ದ ಸಭೆಗಳಲ್ಲಿ ಭಾಗವಹಿಸುತ್ತಾ ಕೊನೆಯಲ್ಲಿ ಕುಳಿತುಕೊಳ್ಳುತ್ತಿದ್ದೆ.‌ ಈಗ ರಾಜ್ಯದ ವಿಧಾನಸಭೆಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿದೆ. ಬ್ಯಾರಿ ಸಮುದಾಯದಿಂದ ಬಂದ ಓರ್ವ ವ್ಯಕ್ತಿ ಎನ್ನುವುದಕ್ಕೆ ಹೆಮ್ಮೆ ಇದೆ ಎಂದು ಖಾದರ್ ಹೇಳಿದರು.

ಬ್ಯಾರಿ ಅಕಾಡೆಮಿಯು ಕೇವಲ ಅಧ್ಯಕ್ಷ ಹಾಗೂ ಸದಸ್ಯರಿಗೆ ಮಾತ್ರ ಸೀಮಿತವಾಗದೆ ಬ್ಯಾರಿ ಸಮುದಾಯದ ಅಭಿವೃದ್ಧಿಯಲ್ಲಿ ಕೂಡ ಪ್ರಮುಖ ಪಾತ್ರ ವಹಿಸುವಂತಾಗಲಿ.‌ ಅಧ್ಯಕ್ಷ ಉಮರ್ ಯು ಎಚ್ ಅವರಲ್ಲಿ ಇದನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಹಾಗೂ ನಾಯಕತ್ವ ಇದೆ.‌ ಅಕಾಡೆಮಿಯು ನೆನಪಿನಲ್ಲಿ ಉಳಿಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಸ್ಪೀಕರ್ ಯು ಟಿ ಖಾದರ್ ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಕ್ರಿಶ್ಚಿಯನ್ ಸಮುದಾಯವು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದಂತೆ ಬ್ಯಾರಿ ಸಮುದಾಯ ಕೂಡ ಮುಂದುವರಿಯುತ್ತಿರುವುದು ಖುಷಿಯ ಸಂಗತಿ. ದಿವಂಗತ ಯುಟಿ ಫರೀದ್, ಬಿ ಎ ಮೊಯ್ದಿನ್ ಬದಲಾವಣೆಯ ಹರಿಕಾರರು. ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಬಿ ಎ ಮೊಯ್ದಿನ್ ಅವರು ಸಮುದಾಯದ ಬದಲಾವಣೆ ಮಾಡುವಲ್ಲಿ ಬಹಳಷ್ಟು ಪಾತ್ರ ವಹಿಸಿದ್ದಾರೆ‌. ಶೈಕ್ಷಣಿಕ ಕ್ರಾಂತಿ ಉಂಟು ಮಾಡಿದ್ದಾರೆ. ಅವರನ್ನು ಸ್ಮರಿಸಿಕೊಳ್ಳಬೇಕು" ಎಂದರು‌.

"ಬ್ಯಾರಿ ಸಮುದಾಯದ ಜನ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ. ಸ್ಪೀಕರ್ ಆಗಿ ಯು ಟಿ ಖಾದರ್ ಆಯ್ಕೆಯಾಗಿದ್ದಾಗ ನಾನೇ ಖುದ್ದು ಫೋನ್ ಮಾಡಿ, ಯಾಕೆ ಇದನ್ನು ವಹಿಸಿದ್ದೀರಾ ಎಂದು ಪ್ರಶ್ನಿಸಿದ್ದೆ.‌ ಆದರೆ ಇಂದು ಸ್ಪೀಕರ್ ಯು ಟಿ ಖಾದರ್ ಬಗ್ಗೆ ತುಂಬಾ ಹೆಮ್ಮೆ ಪಡುತ್ತಿದ್ದೇವೆ. ವಿಧಾನಸಭೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಕೇವಲ ಆಡಳಿತ ಪಕ್ಷದವರು ಮಾತ್ರವಲ್ಲದೇ ವಿಪಕ್ಷಗಳು ಕೂಡ ಅವರ ಕಾರ್ಯವೈಖರಿಯನ್ನು ಕಂಡು ಖುಷಿ ಪಡುತ್ತಿದ್ದಾರೆ. ಬ್ಯಾರಿ ಸಮುದಾಯದ ಹಿನ್ನೆಲೆ ಇರುವ ಖಾದರ್ ಅವರು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ನೂತನ ಅಧ್ಯಕ್ಷರಾದ ಉಮರ್ ಯು ಎಚ್ ಮಾತನಾಡಿ, "ಮುಂದಿನ ಮೂರು ವರ್ಷಗಳಲ್ಲಿ ಬ್ಯಾರಿ ಅಕಾಡೆಮಿ ಏನು ಕೆಲಸ ಮಾಡಬೇಕು ಎಂಬ ಸ್ಪಷ್ಟವಾದ ಕಲ್ಪನೆ ನಮಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಬ್ಯಾರಿ ಅಕಾಡೆಮಿಯು ಬ್ಯಾರಿ ಸಮುದಾಯದ ನಡುವಿನ ಕೊಂಡಿಯಂತೆ ಕಾರ್ಯ ನಿರ್ವಹಿಸಲಿದೆ" ಎಂದು ತಿಳಿಸಿದರು.

"ಬ್ಯಾರಿ ಭಾಷೆಯನ್ನು ಉಳಿಸಿ, ಬೆಳೆಸಬೇಕಾದವರು ಬ್ಯಾರಿಗಳು. ಕೇವಲ ಅಕಾಡೆಮಿಯಿಂದ ಈ ಕೆಲಸ ಸಾಧ್ಯವಿಲ್ಲ. ಬ್ಯಾರಿ ಸಮುದಾಯದ ಬಗ್ಗೆ ಸಂಶೋಧನೆಗಳು ನಡೆಯಬೇಕು, ಶಾಲೆಗಳಲ್ಲಿ ಬ್ಯಾರಿಯನ್ನು ಐಚ್ಛಿಕ ಭಾಷೆಯಾಗಿ ಕಲಿಸಬೇಕು, ಬ್ಯಾರಿ ಭವನ ನಿರ್ಮಾಣ ಮಾಡುವುದು ನಮ್ಮ ಆದ್ಯತೆಯಾಗಿದೆ. ಅಕಾಡೆಮಿಯಲ್ಲಿರುವ ಸುಮಾರು ಆರು ಕೋಟಿ ಹಣದಲ್ಲಿ ಈ ಕೆಲಸ ಮಾಡಬೇಕಿದೆ. ಹೆಚ್ಚು ಅನುದಾನ ಬೇಕಾದಲ್ಲಿ ಸರ್ಕಾರದ ಬಳಿ ಬಳಿ ಕೇಳುತ್ತೇವೆ" ಎಂದು ತಿಳಿಸಿದರು.

ಸೆಪ್ಟೆಂಬರ್ ತಿಂಗಳಲ್ಲಿ ಬಹುಸಂಸ್ಕೃತಿ ಉತ್ಸವ

ಕರಾವಳಿಯ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಬ್ಯಾರಿ ಅಕಾಡೆಮಿ, ತುಳು ಅಕಾಡೆಮಿ ಹಾಗೂ ಕೊಂಕಣಿ ಅಕಾಡೆಮಿ ಪ್ರಯತ್ನಿಸಲಿದೆ ಎಂದ ಉಮರ್ ಯು ಎಚ್, ಸೆಪ್ಟೆಂಬರ್ ತಿಂಗಳ 24 ಮತ್ತು 25ರಂದು ಎರಡು ದಿನಗಳ ಕಾಲ ಮಂಗಳೂರಿನಲ್ಲಿ ಬಹುಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿದರು. ವೇದಿಕೆಯಲ್ಲಿ ಬೆಂಗಳೂರು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಉಮರ್ ಟಿ ಕೆ, ಕಾರ್ಯದರ್ಶಿ ಶರೀಫ್ ಟಿ.ಕೆ., ಬೆಂಗಳೂರು ಬ್ಯಾರೀಸ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಶಬೀರ್ ಬ್ರಿಗೇಡ್, ಮಂಗಳೂರು ಮುಸ್ಲಿಮ್ಸ್ ಯೂತ್ ಕೌನ್ಸಿಲ್ ಗೌರವಾಧ್ಯಕ್ಷ ಬಿ.ಎಂ. ಉಮರ್ ಹಾಜಿ, ಅಧ್ಯಕ್ಷ ಅಬೂಬಕರ್ ಹೆಚ್., ಚಿಕ್ಕಮಗಳೂರು ‌ಜಿಲ್ಲಾ ಬ್ಯಾರಿ ಒಕ್ಕೂಟದ ಉಪಾಧ್ಯಕ್ಷ ಉಮರ್ ಫಾರೂಕ್ ತರೀಕೆರೆ, ಕಾರ್ಯದರ್ಶಿ ಬದ್ರುದ್ದೀನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅಕಾಡೆಮಿ ಸದಸ್ಯರಾದ ಅಬೂಬಕ್ಕರ್ ಅನಿಲಕಟ್ಟೆ ಸ್ವಾಗತಿಸಿ, ಖಾಲಿದ್ ಉಜಿರೆ, ಶರೀಫ್ ಬೆಳ್ಳಾರೆ ಮತ್ತು ಸಾರಾ ಅಲಿ ಪರ್ಲಡ್ಕ ನಿರೂಪಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ. ಧನ್ಯವಾದವಿತ್ತರು.

ಜೆ ಪಿ ನಗರದ ಮಕ್ಕಳ ದಪ್ಪು ಕುಣಿತದೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶರೀಫ್ ನಿರ್ಮುಂಜೆ, ಅಕಾಡೆಮಿ ಸದಸ್ಯ ಶಮೀರ್ ಮುಲ್ಕಿ ಮತ್ತು ತಾಜುದ್ದೀನ್ ಅಮ್ಮುಂಜೆ ಹಾಗೂ ಮಲ್ಲಿಕಾ ಶೆಟ್ಟಿ ಬ್ಯಾರಿ ಹಾಡುಗಳನ್ನು ಹಾಡಿದರು. ಬ್ಯಾರಿ ಅಕಾಡೆಮಿಯ ಇತರ ಸದಸ್ಯರಾದ ಬಿ.ಎಸ್. ಮುಹಮ್ಮದ್, ಹಫ್ಸಾ ಬಾನು, ಶಮೀರಾ ಜಹಾನ್ ಮತ್ತು ಹಮೀದ್ ಹಸನ್ ಮಾಡೂರು ಸೇರಿದಂತೆ ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಮಂದಿ ಮತ್ತು ಹಿತೈಷಿಗಳು ಭಾಗವಹಿಸಿದ್ದರು.



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News