ಬೆಂಗಳೂರು‌ : ವಿಧವಾ ವೇತನ, ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಇಬ್ಬರು ಸೆರೆ

Update: 2024-02-06 13:18 GMT

ಬೆಂಗಳೂರು: ಬಿಬಿಎಂಪಿ ವತಿಯಿಂದ ಸಬ್ಸಿಡಿ ದರದಲ್ಲಿ ಕಾರು, ಸೈಟ್, ಯುವಕರಿಗೆ ಕೆಲಸ, ವಿಧವೆಯವರ ಮಾಸಾಶನ ಮಾಡಿಸಿಕೊಡುವುದಾಗಿ ನಂಬಿಸಿ, ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ದೀಪಕ್(22) ಹಾಗೂ ಹರೀಶ್(21) ಎಂಬುವರನ್ನು ಬಂಧಿತರು ಎಂದು ಗುರುತಿಸಲಾಗಿದೆ.

ಮೋಜು-ಮಸ್ತಿಯ ಜೀವನ ನಡೆಸುವುದಕ್ಕಾಗಿ ವಿಧವೆಯವರು, ಗೃಹಿಣಿಯರು, ಯುವಕರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕರೆ ಮಾಡುತ್ತಿದ್ದರು. ವಿಧವಾ ವೇತನ, ಬಿಬಿಎಂಪಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಹಾಗೂ ಸಬ್ಸಿಡಿ ದರದಲ್ಲಿ ಕಾರು, ಸೈಟು ಕೊಡಿಸುತ್ತೇವೆಂದು ಆಮಿಷವೊಡ್ಡುತ್ತಿದ್ದರು. ನಂತರ ಅವರಿಂದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಯಾವುದೇ ಕೆಲಸ ಮಾಡಿಕೊಡದೇ ವಂಚಿಸುತ್ತಿದ್ದರು.

2023ರ ಅಕ್ಟೋಬರ್ ನಲ್ಲಿ ಇದೇ ರೀತಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವುದಾಗಿ ತಿಳಿಸಿ, 8 ಸಾವಿರ ರೂ. ಆನ್‍ಲೈನ್ ಮುಖಾಂತರ ವರ್ಗಾವಣೆ ಮಾಡಿಸಿಕೊಂಡಿದ್ದರು. ನಂತರ ಯಾವುದೇ ಕೆಲಸ ಕೊಡಿಸದೇ ವಂಚಿಸಿದ್ದರ ಕುರಿತು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 2 ಮೊಬೈಲ್ ಫೋನ್‍ಗಳು, 2 ಸಾವಿರ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ಇದೇ ರೀತಿ ಸುಮಾರು 60ಕ್ಕೂ ಹೆಚ್ಚು ಜನರಿಗೆ 15 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.

ಆದರೆ, ವಂಚನೆಗೊಳಗಾದ ಅನೇಕರು ಇದುವರೆಗೂ ಯಾವುದೇ ದೂರನ್ನು ನೀಡದ ಕಾರಣ ಪ್ರಕರಣ ದಾಖಲಾಗಿಲ್ಲ. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ನಗರ [ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News