ಬೆಂಗಳೂರು | ʼಈವೆಂಟ್ ಮ್ಯಾನೇಜ್‍ಮೆಂಟ್ʼ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ನಾಲ್ವರ ರಕ್ಷಣೆ, ದಂಪತಿಯ ಬಂಧನ

Update: 2024-10-12 15:00 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಈವೆಂಟ್ ಮ್ಯಾನೇಜ್‍ಮೆಂಟ್ ಉದ್ಯಮದ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ದಂಪತಿಯನ್ನು ಸಿಸಿಬಿಯ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ದಳದ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಪಟ್ಟೆಗಾರಪಾಳ್ಯದ ನಿವಾಸಿಗಳಾಗಿರುವ ಪ್ರಕಾಶ್ ಹಾಗೂ ಪಾರಿಜಾತ ಬಂಧಿತ ದಂಪತಿ ಎಂದು ಗುರುತಿಸಲಾಗಿದೆ.

ರಾಕೇಶ್ ಹಾಗೂ ಪೂಜಾ ಎಂಬ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳು, ಬಡಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಉದ್ಯೋಗದ ಭರವಸೆ ನೀಡುತ್ತಿದ್ದರು. ಬಳಿಕ ಅವರನ್ನು ಈವೆಂಟ್ ಮ್ಯಾನೇಜ್‍ಮೆಂಟ್ ಕೆಲಸದ ಸೋಗಿನಲ್ಲಿ ವಾರಕ್ಕೊಮ್ಮೆ ತಮಿಳುನಾಡು, ಪಾಂಡಿಚೇರಿ ರೆಸಾರ್ಟ್‍ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಕರೆದೊಯ್ದು ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳುತ್ತಿದ್ದರು ಎನ್ನಲಾಗಿದೆ.

ಹೊರ ರಾಜ್ಯದ ಉದ್ಯಮಿಗಳು ಹಾಗೂ ರೆಸಾರ್ಟ್‍ಗಳಿಗೆ ಭೇಟಿ ನೀಡುತ್ತಿದ್ದವರಿಂದ 25 ಸಾವಿರದಿಂದ 50 ಸಾವಿರ ರೂ.ವರೆಗೂ ಹಣ ಪಡೆದು ದಂಧೆ ನಡೆಸುತ್ತಿದ್ದ ಆರೋಪಿಗಳು, ಮದ್ಯವನ್ನೂ ಸಹ ಪೂರೈಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಿಂದ ಅಕ್ರಮವಾಗಿ ಯುವತಿಯರನ್ನು ಕರೆದೊಯ್ಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿತರ ವಶದಲ್ಲಿದ್ದ ನಾಲ್ವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News